ಬೆಂಗಳೂರು: ಇಲ್ಲಿಯ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಸಾಂತ್ವನ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರಧಾನಿ ಕಾರ್ಯಾಲಯ ಸಂದೇಶ ಪ್ರಕಟಿಸಿದೆ.
8 ಜನರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುತ್ತಿದೆ ಎಂದು ಬರೆದುಕೊಳ್ಳಲಾಗಿದೆ.
ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಮೃತ ಕಾರ್ಮಿಕರ ಕುಟುಂಬಸ್ಥರ ದುಃಖದಲ್ಲಿ ನಾನು ಭಾಗಿ ಎಂದಿದ್ದಾರೆ. ಜತೆಗೆ, ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಕಟ್ಟಡ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮಂಗಳವಾರ ಸಂಜೆಯಿಂದಲೂ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 8 ಕಾರ್ಮಿಕರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಈಗಾಗಲೇ ಘಟನೆಯಲ್ಲಿ 14 ಜನರನ್ನು ರಕ್ಷಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾಲೀಕರ ಮೇಲೆ ಎಫ್ ಐಆರ್ ದಾಖಲಾಗಿದ್ದು, ಬಿಬಿಎಂಪಿ ಹೊರಮಾವು ಉಪವಿಭಾಗದ ಎಇಇ ವಿನಯ್ ಎಂಬುವವರನ್ನು ಅಮಾನತು ಮಾಡಲಾಗಿದೆ. ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.