ಬೆಂಗಳೂರು: ನಗರದ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ಸ್ಥಳಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿ ಅಕ್ರಮ ಕಟ್ಟಡಗಳನ್ನು ಕಟ್ಟಿ ಅನಾಹುತ ಸಂಭವಿಸಿದರೆ ಸತ್ತವರಿಗೆ ಹೊಣೆ ಯಾರು? ಅವನು ಎಲ್ಲಿ ಕಮಿಷನರ್ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ.
ಈಗಾಗಲೇ ಘಟನೆಯಲ್ಲಿ 8 ಜನ ಸಾವನ್ನಪ್ಪಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬದವರಿಗೆ ಕಾರ್ಮಿಕ ಇಲಾಖೆಯಿಂದ 2 ಲಕ್ಷ ರೂಪಾಯಿ, ಬಿಬಿಎಂಪಿಯಿಂದ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. 6 ಜನ ಗಾಯಗೊಂಡಿದ್ದು, ಅವರ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪರಿಹಾರ ನೀಡಿರುವುದು ಅವರ ಜೀವಕ್ಕೆ ಸಮವಲ್ಲ. ಜೀವಕ್ಕೆ ಬೆಲೆ ಕಟ್ಟಲಾಗದು. ಆದರೂ ಮೃತರೆಲ್ಲ ಕೂಲಿ ಕಾರ್ಮಿಕರು. ಅವರನ್ನು ನಂಬಿಕೊಂಡವರಿಗೆ ನೆರವು ನೀಡಬೇಕಿದೆ ಎಂದು ಸಿಎಂ ಹೇಳಿದ್ದಾರೆ.