ಬೆಂಗಳೂರು : ಬೆಂಗಳೂರಿನ ರಸ್ತೆಗಳದ್ದು ದಿನಕ್ಕೊಂದು ಗೋಳು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ರಸ್ತೆಗಳ ಬಗ್ಗೆಯೇ ದೂರು, ಮಾತುಕತೆ ನಡೆಯುತ್ತಲೇ ಇದೆ. ಇದೀಗ ಇದಕ್ಕೆ ಸಂಬಂಧಪಟ್ಟಂತೆ ಪೋಸ್ಟ್ ಒಂದು ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರು ನಿವಾಸಿಯೊಬ್ಬರು ಈ ಬಗ್ಗೆ ರೆಡ್ಡಿಟ್‌ನಲ್ಲಿ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ತುಂಬಾ ವ್ಯಂಗ್ಯಾತ್ಮಕವಾಗಿದ್ದು, ನಗರದಲ್ಲಿ ಪ್ರತಿದಿನ ನಡೆಯುವ ಕಾಮಗಾರಿಯ ಬಗ್ಗೆ ಅಣಕಿಸಿದ್ದಾರೆ. ಎಚ್‌ಎಸ್‌ಆರ್ ಲೇಔಟ್‌ನ 9ನೇ ಮುಖ್ಯ ರಸ್ತೆಯಲ್ಲಿರುವ ತಮ್ಮ ನಿವಾಸದ ಬಳಿ ಇರುವ ರಸ್ತೆಯನ್ನು 11 ತಿಂಗಳಲ್ಲಿ ಕನಿಷ್ಠ 10 ಬಾರಿ ರಸ್ತೆಯನ್ನು ಅಗೆಯಲಾಗಿದೆ.
ಪ್ರತಿ 2-3 ವಾರಗಳಿಗೊಮ್ಮೆ ಕೆಲವು ಅಧಿಕಾರಿಗಳು, ಕಾರ್ಮಿಕರು ಬರುತ್ತಾರೆ, ರಸ್ತೆಯನ್ನು ಅಗೆಯುತ್ತಾರೆ, ಅರ್ಧದಷ್ಟು ತೇಪೆ ಹಾಕುತ್ತಾರೆ, ಮರುದಿನ ಅಲ್ಲಿಂದ ಅಧಿಕಾರಿಗಳು, ಕಾರ್ಮಿಕರು ಮಾಯಾ, ಇದನ್ನು ನೋಡಿ.. ನೋಡಿ ಸಾಕಾಗಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಇದೊಂದು ನಿಗೂಢ ಕಾಮಾಗಾರಿ ಎಂದು ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.



















