ಬೆಂಗಳೂರಿಗರೇ ದಾಖಲೆಯ ಬಿಸಿಲು ದಾಖಲಾಗುವ ದಿನ ಹತ್ತಿರ
ಬೆಂಗಳೂರಿನ ನಾಗರಿಕರೇ ಎಚ್ಚರ.. ಎಚ್ಚರ…! ಇದು ಭಯ ಹುಟ್ಟಿಸುವ ಸುದ್ದಿಯಲ್ಲ. ನಿಮ್ಮನ್ನು ಎಚ್ಚರಿಸುವ ಸುದ್ದಿ. ಇದನ್ನು ನೀವು ನಾವು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಬೆಂಗಳೂರನ್ನು ಉದ್ಯಾನವನಗಳ ನಗರ, ಸಿಲಿಕಾನ್ ಸಿಟಿ, ಐಟಿ-ಬಿಟಿ ಸಿಟಿ ಅಂತೆಲ್ಲಾ ಕರೆಯುತ್ತಾರೆ. ಎಲ್ಲಾ ವಯೋಮಾನದವರಿಗೂ ಇದು ಹಾಟ್ ಫೇವರೇಟ್ ಸಿಟಿ. ಇಂತಹ ಹಾಟ್ ಸಿಟಿ ಈಗ ಹೀಟ್ ಸಿಟಿಯಾಗಿ ಬದಲಾಗುತ್ತಿದೆ.
ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ, ಯುವಕರಿಗೆ ಮೋಜು ಮಸ್ತಿ ಮಾಡುವುದಕ್ಕೆ, ಮಧ್ಯ ವಯಸ್ಕರಿಗೆ ಕೆಲಸ ಮಾಡಲು, ನಿವೃತ್ತಿ ಹೊಂದಿದವರಿಗೆ ಕಾಲ ಕಳೆಯಲು ಇದು ಹೇಳಿ ಮಾಡಿಸಿದ ಸ್ಥಳ. ಒಂದು ಮಾದರಿಯಲ್ಲಿ ಬೆಂಗಳೂರು ಊಟಿಯಲ್ಲಿನ ವಾತಾವರಣ ನೆನಪಿಸುವುದರಲ್ಲಿ ಅನುಮಾನವೇ ಇಲ್ಲ ಎಂಬ ಮಾತುಗಳು ಇದೆ.
ಆದ್ರೆ, ಇಷ್ಟೆಲ್ಲಾ ವೈವಿಧ್ಯಮಯ ತಾಣವಾಗಿರುವ ಬೆಂಗಳೂರು, ಇದೀಗ ಹೀಟ್ ಸಿಟಿ ಆಗಿ ಮಾರ್ಪಟ್ಟಿರುವುದು ಮಾತ್ರ ವಿಪರ್ಯಾಸ. ರಾಜ್ಯದಲ್ಲಿ ಈಗಾಗಲೇ ಬೇಸಿಗೆಯ ಬೇಗೆ ಶುರುವಾಗಿದೆ. ಇದರ ಮಧ್ಯೆ ಹವಾಮಾನ ಇಲಾಖೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ರಾಜ್ಯದೆಲ್ಲೆಡೆ ಈ ಬಾರಿಯ ಬೇಸಿಗೆ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾಗಲಾಗಿದೆ ಎಂಬ ಮಾಹಿತಿಯನ್ನು ಹೊರ ಹಾಕಿದೆ.
ಇನ್ನು ಬೆಂಗಳೂರಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಾರಿ ಅತಿ ಹೆಚ್ವು ಉಷ್ಣಾಂಶ ಅಂದರೆ 41 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ ಎಂಬ ಆಘಾತಕಾರಿ ಅಂಶ ಹೊರ ಬಿದ್ದಿದ್ದು, ಇದಕ್ಕೆ ಬೆಂಗಳೂರಿನ ನಾಗರಿಕರೇ ಕಾರಣ ಎಂದಿದ್ದಾರೆ.
ಅಷ್ಟಕ್ಕೂ ಏಕೆ ಇಷ್ಟೊಂದು ಬಿಸಿಲಿನ ಝಳ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮರಗಳ ಮಾರಾಣ ಹೋಮವಾಗಿದೆ. ನೀರಿನ ಮಟ್ಟ ಅಂದರೆ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಮರಗಳೇ ಹೆಚ್ಚಾಗಿದ್ದ ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರನಲ್ಲಿ ಕೊಡಲಿ ಪೆಟ್ಟು ಕೊಟ್ಟು ಕೊಟ್ಟು ನಾವೇ ಈ ಪರಿಸ್ಥಿತಿ ನಿರ್ಮಿಸಿಕೊಂಡಿದ್ದೇವೆ.
ವಿವಿಧ ವಿನ್ಯಾಸಗಳ ಬಂಗಲೆಗಳು, ಮುಗಿಲೆತ್ತರದ ಕಟ್ಟಡಗಳು, ಮಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳ ನಿರ್ಮಾಣವೇ ಇದಕ್ಕೆಲ್ಲಾ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಮುಂದಿನ ಎರಡು ತಿಂಗಳ ಕಾಲ ಬಿಸಿಲಿನ ಝಳ ಎಲ್ಲರಿಗೂ ತಟ್ಟುವುದರಲ್ಲಿ ಅನುಮಾನವಿಲ್ಲ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬೆಂಗಳೂರೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಿಸಿಲಿನ ಬೇಗೆ ಅನುಭವಿಸಬೇಕು ಅಂದರೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರುವ ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು, ಕಲ್ಬುರ್ಗಿ, ಬೀದರ್ ಭಾಗಗಳನ್ನು ದೇವರೇ ಕಾಪಾಡಬೇಕು.
ಈಗ ನಾವು ಬಹಳ ಎಚ್ಚರಿಕೆಯಿಂದ ಈ ಬಾರಿಯ ಬೇಸಿಗೆ ಕಾಲವನ್ನು ಎದುರಿಸಬೇಕಿದ್ದು, ನಾಗರಿಕರು ಹೆಚ್ಚೆಚ್ಚು ತಂಪು ಪಾನೀಯಗಳು, ನೀರು, ಏಳನೀರು, ಹಣ್ಣು, ತರಕಾರಿಗಳನ್ನು ಸೇವಿಸಬೇಕಿದೆ. ಸಾಧ್ಯವಾದಷ್ಟು ಮಧ್ಯಾಹ್ನ 12 ಘಂಟೆಯಿಂದ 4 ಘಂಟೆಯವರೆಗೆ ನೆತ್ತಿ ಸುಡುವ ಬಿಸಿಲಿನಲ್ಲಿ ಹೊರಗೆ ಓಡಾಟ ಮಾಡುವುದನ್ನು ನಿಲ್ಲಿಸಿದ್ರೆ ಉತ್ತಮ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.
ಒಟ್ಟಾರೆ, ಬೆಂಗಳೂರು ಎಲ್ಲರಿಗೂ ಹಾಟ್ ಫೇವರೇಟ್ ಸಿಟಿ ಆಗಿತ್ತು. ಆದ್ರೆ ಈ ಬಾರಿಯ ಬೇಸಿಗೆ ಅದನ್ನು ಹೀಟ್ ಸಿಟಿಯಾಗಿ ಪರಿವರ್ತಿಸಿರುವುದು ಮಾತ್ರ ವಿಪರ್ಯಾಸ.