ಬೆಂಗಳೂರು : ಬೆಂಗಳೂರು ನಗರ ವಿಶ್ವ ವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮತ್ತು ಅರ್ಥಶಾಸ್ತ್ರಜ್ಞ ದಿ. ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನಿಡುವ ವಿಚಾರವನ್ನೊಳಗೊಂಡ ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿದೆ.
‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ. ಆಧುನಿಕ ಭಾರತದ ಆರ್ಥಿಕ ನೀತಿಗಳ ಹರಿಕಾರರೆಂದೇ ಗುರುತಿಸಿಕೊಂಡಿದ್ದ ಮನಮೋಹನ್ ಸಿಂಗ್ ಅವರ ಹೆಸರು ಇಡಲು ನಿರ್ಧರಿಸಿದೆ.
ಬೆಂಗಳೂರು ನಗರ ವಿಶ್ವ ವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ವಿಶ್ವ ವಿದ್ಯಾಲಯವೆಂದು ಮರುನಾಮಕರಣ ಮಾಡುವ ಬಗ್ಗೆ ಕಳೆದ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು.
2004 ರಿಂದ 2014ರವರೆಗೆ ಎರಡು ಅವಧಿಗೆ ಒಟ್ಟು ಹತ್ತು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, 1991ರಲ್ಲಿ ಕೇಂದ್ರದ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆಗ ಅವರು ಜಾರಿಗೆ ತಂದ ಉದಾರೀಕರಣ ಆರ್ಥಿಕ ನೀತಿ ದೇಶದ ಆರ್ಥಿಕತೆಗೆ ಬಹುದೊಡ್ಡ ಉತ್ತೇಜನ ನೀಡಿತ್ತು. ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದ ಹರಿಕಾರರಾಗಿ ಸಿಂಗ್ ಅವರನ್ನು ಇತಿಹಾಸ ಗುರುತಿಸಿದೆ.
ಇನ್ನು, ಮನಮೋಹನ್ ಸಿಂಗ್ ಅವರ ಹೆಸರನ್ನು ಈಗಿರುವ ವಿಶ್ವವಿದ್ಯಾಲಯಕ್ಕೆ ಗೌರವಾರ್ಥವಾಗಿ ಮರುನಾಮಕರಣ ಮಾಡುವ ಬದಲು ಹೊಸ ವಿಶ್ವವಿದ್ಯಾಲಯ ಆರಂಭಿಸಿ ಅವರ ಹೆಸರನ್ನು ಇಡಿ ಎಂದು ವಿರೋಧ ಪಕ್ಷ ಬಿಜೆಪಿ ಸೂಚಿಸಿತ್ತು. ‘ನಡೆದಾಡುವ ದೇವರು’ ಎಂದೇ ಖ್ಯಾತರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ತುಮಕೂರು ವಿಶ್ವವಿದ್ಯಾಲಯಕ್ಕೂ ಇಡಬೇಕಿತ್ತು ಎಂದೂ ಚರ್ಚೆ ನಡೆಯಿತು.