ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆ ಬಿದ್ದು ಮಗು ಸಾವನ್ನಪ್ಪಿರುವಂತಹ ಘಟನೆ ಗುರುವಾರ ಮಧ್ಯಾಹ್ನ ಬೆಂಗಳೂರಿನ ಹೆಚ್ಎಎಲ್ನ ಚಿನ್ನಪ್ಪನಹಳ್ಳಿಯಲ್ಲಿ ಸಂಭವಿಸಿದೆ. ಮನಸ್ವಿ(4) ಸಾವನ್ನಪ್ಪಿರುವ ಮಗು. ಮತ್ತಿಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಗುವಿನ ಪೋಷಕರು ವಿಜಯಪುರ ಜಿಲ್ಲೆಯವರು. ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ಸಿಮೆಂಟ್ ಶೀಟ್ನ ಶೆಡ್ನಲ್ಲಿ ಕುಟುಂಬ ವಾಸವಾಗಿತ್ತು. ಇನ್ನು ಗಾಯಾಳುಗಳಾದ ಶ್ರಿಯನ್ (6) ಮತ್ತು ಶೇಖರ್(5)ರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿರ್ಮಾಣ ಹಂತದ ಕಟ್ಟಡ ಸುಬ್ಬಾರಾವ್ ಎಂಬುವವರಿಗೆ ಸೇರಿದೆ. ನಿರ್ಮಾಣ ವೇಳೆ ಅಗತ್ಯವಾದ ಸುರಕ್ಷತಾ ಕ್ರಮಗಳು ಹಾಗೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. 4ನೇ ಮಹಡಿ ಮೇಲಿಂದ ಸಿಮೆಂಟ್ ಇಟ್ಟಿಗೆ ಬಿದ್ದಿದ್ದು, ಇಟ್ಟಿಗೆ ಬಿದ್ದ ರಭಸಕ್ಕೆ ಮನೆಯ ಶೀಟ್ ಸಂಪೂರ್ಣ ಧ್ವಂಸವಾಗಿದೆ. ಮನೆಯಲ್ಲಿದ್ದ ಮಗುವಿನ ಮೇಲೆ ಬಿದ್ದಿದ್ದು, ಮಗು ಸ್ಥಳದಲ್ಲೇ ಮೃತಪಟ್ಟಿದೆ. ಐದಾರು ಸಿಮೆಂಟ್ ಇಟ್ಟಿಗೆಗಳು ಮಂಚದ ಮೇಲೆ ಬಿದ್ದಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಭಾರತದ ಪ್ರಧಾನಿಗೆ 29ನೇ ಜಾಗತಿಕ ಗೌರವ | ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ ಓಮನ್



















