ಸಂಘಟಿತ ಹೋರಾಟ ನೀಡದ ಬುಲ್ಸ್ ವಿರುದ್ಧ ದಬಾಂಗ್ ದಿಲ್ಲಿಗೆ 41-34 ಅಂತರದ ಗೆಲುವು
ವೈಜಾಗ್, ಸೆಪ್ಟೆಂಬರ್ 2: ಆರಂಭಿಕ ಹಿನ್ನಡೆಯಿಂದ ಒತ್ತಡಕ್ಕೆ ಸಿಲುಕಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿದಬಾಂಗ್ ದಿಲ್ಲಿತಂಡದ ವಿರುದ್ಧ 7ಅಂಕಗಳಿಂದ ಪರಾಭವಗೊಂಡಿತು.
ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿಮಂಗಳವಾರ ನಡೆದ ಮೊದಲ ಪಂದ್ಯದಲ್ಲಿಬೆಂಗಳೂರು ಬುಲ್ಸ್ 34-41 ಅಂಕಗಳಿಂದ ದಬಾಂಗ್ ದಿಲ್ಲಿಗೆ ಶರಣಾಯಿತು. ಹೀಗಾಗಿ ಬುಲ್ಸ್ ತಂಡ ಟೂರ್ನಿಯಲ್ಲಿಸತತ ಎರಡನೇ ಸೋಲಿಗೆ ಒಳಗಾಯಿತು. ಬೆಂಗಳೂರು ಬುಲ್ಸ್ ಪರ ರೇಡರ್ ಆಶಿಶ್ ಮಲಿಕ್(8 ಅಂಕ) ಮತ್ತು ಆಲ್‌ರೌಂಡರ್ ಅಲಿರೇಜಾ ಮಿರ್ಜಾಯನ್(10 ಅಂಕ) ಹೊರತುಪಡಿಸಿ ಉಳಿದವರಿಂದ ದಿಟ್ಟ ಪ್ರದರ್ಶನ ಮೂಡಿಬರಲಿಲ್ಲ. ಅತ್ತ ದಬಾಂಗ್ ದಿಲ್ಲಿತಂಡದ ಪರ ಆಶು ಮಲಿಕ್ (15 ಅಂಕ) ಮಿಂಚಿದರೆ, ನೀರಜ್ ನರ್ವಾಲ್ ( 7ಅಂಕ) ಸಾಥ್ ನೀಡಿದರು.

ಪಂದ್ಯದ 30 ನಿಮಿಷಗಳ ವೇಳೆಗೆ 17-34ರಲ್ಲಿಮರು ಹೋರಾಟ ಸಂಘಟಿಸಿದ ಬೆಂಗಳೂರು, ಎದುರಾಳಿ ತಂಡಕ್ಕೆ ಆತಂಕ ಮೂಡಿಸಿತು. ಆದರೆ ಇದೇ ಲಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಂತಿಮ ನಿಮಿಷಕ್ಕೆ 29-39ರಲ್ಲಿಹಿನ್ನಡೆ ತಗ್ಗಿಸಿತಾದರೂ 2ನೇ ಸೋಲಿನಿಂದ ಪಾರಾಗಲು ಮಾತ್ರ ಸಾಧ್ಯವಾಗಲಿಲ್ಲ.
ಪೂರ್ವಾರ್ಧದಲ್ಲಿ3 ಟ್ಯಾಕಲ್ ಹಾಗೂ 8 ರೇಡಿಂಗ್ ಪಾಯಿಂಟ್ಸ್ ಕಲೆಹಾಕಿದ ಬುಲ್ಸ್, ಉತ್ತರಾರ್ಧದಲ್ಲಿ13 ಟ್ಯಾಕಲ್ ಜತೆಗೆ 20 ರೇಡಿಂಗ್ ಪಾಯಿಂಟ್ಸ್ ಗಳಿಸಿ ಪ್ರಬಲ ತಿರುಗೇಟು ನೀಡಿತು.
25ನೇ ನಿಮಿಷದಲ್ಲಿಅಲಿರೇಜಾ ದಿಲ್ಲಿತಂಡದ ಟ್ಯಾಕಲ್‌ಗೆ ಒಳಗಾದ ಕಾರಣ ಎರಡನೇ ಬಾರಿ ಆಲೌಟ್ ಬಲೆಗೆ ಸಿಲುಕಿದ ಬೆಂಗಳೂರು ಬುಲ್ಸ್ 13-28 ರಲ್ಲಿ ಹಿನ್ನಡೆಗೆ ಒಳಗಾಯಿತು. ಕೋಚ್ ಬಿ.ಸಿ. ರಮೇಶ್ ಅವರಿಂದ ಹಲವು ಕಾರ್ಯತಂತ್ರಗಳ ನೆರವು ಪಡೆದ ಬುಲ್ಸ್ ಆಟಗಾರರು ಹಿನ್ನಡೆ ತಗ್ಗಿಸುವ ಗುರಿಯೊಂದಿಗೆ ದ್ವಿತೀಯಾರ್ಧ ಆರಂಭಿಸಿದರು. ಆದರೆ ಮೊದಲಾವಧಿಯಲ್ಲಿನೀಡಿದ ಪ್ರದರ್ಶನಕ್ಕಿಂತ ಯಾವುದೇ ಭಿನ್ನವಿರಲಿಲ್ಲ. ಹೀಗಾಗಿ ದಬಾಂಗ್ ದಿಲ್ಲಿತಂಡದ ಮೇಲುಗೈ ನಿರಂತರವಾಗಿ ಹೆಚ್ಚುತ್ತಲೇ 24-11ಕ್ಕೆ ಜಿಗಿಯಿತು. ಇದು ಸಹಜವಾಗಿ ಬೆಂಗಳೂರು ತಂಡದ ಮೇಲಿನ ಒತ್ತಡವನ್ನು ಇಮ್ಮಡಿಗೊಳಿಸಿತು.

ಇದಕ್ಕೂ ಮುನ್ನ ಸಮನ್ವಯತೆ ಕೊರತೆಯಿಂದಾಗಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಗೊಂಡ ಬೆಂಗಳೂರು ಬುಲ್ಸ್ ಪಂದ್ಯದ ಮೊದಲಾರ್ಧದ ಅಂತ್ಯಕ್ಕೆ 11-21ರಲ್ಲಿಹಿನ್ನಡೆ ಅನುಭವಿಸಿತು. ತನ್ನ ಮೊದಲ ಪಂದ್ಯದಲ್ಲಿಪುಣೇರಿ ಪಲ್ಟನ್ ವಿರುದ್ಧ ವೀರೋಚಿತ ಟೈ ಸಾಧಿಸಿದ ಹೊರತಾಗಿಯೂ ಹೊಸದಾಗಿ ಪರಿಚಯಿಸಲಾದ ಟೈಬ್ರೇಕರ್‌ನಲ್ಲಿ2 ಅಂಕಗಳಿಂದ ಪರಾಭವಗೊಂಡಿದ್ದ ಮಾಜಿ ಚಾಂಪಿಯನ್ಸ್ ಬುಲ್ ತಂಡ ಪುಟಿದೇಳುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಿತು. ಆದರೆ ಪಂದ್ಯದ ಆರಂಭದಿಂದಲೇ ಸ್ಟಾರ್ ರೇಡರ್ ಆಶು ಮಲಿಕ್ ಆಕ್ರಮಣಕಾರಿ ದಾಳಿ ನಡೆಸಿದರು. ಇದರಿಂದ ಒತ್ತಡಕ್ಕೆ ಸಿಲುಕಿದ ಬುಲ್ಸ್ ಆಟಗಾರರು ಪದೇ ಪದೇ ಅಂಕಣ ತೊರೆಯಬೇಕಾಯಿತು. ಇದರ ಸಂಪೂರ್ಣ ಲಾಭ ಪಡೆದ ದಬಾಂಗ್ ದಿಲ್ಲಿತಂಡ, ಮೊದಲ 7 ನಿಮಿಷಗಳ ಆಟದಲ್ಲಿ7-2ರಲ್ಲಿ ಮೇಲುಗೈ ಸಾಧಿಸಿತು. ಕೆಲವೇ ಸೆಕೆಂಡ್‌ಗಳಲ್ಲಿಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡಿ 10-3 ರಲ್ಲಿ ಮುನ್ನಡೆ ಕಂಡುಕೊಂಡಿತು.

ಹತ್ತು ನಿಮಿಷಗಳ ಆಟದ ನಂತರ ಹಿನ್ನಡೆ ತಗ್ಗಿಸಲು ಬೆಂಗಳೂರು ಬುಲ್ಸ್ ಆಟಗಾರರು ಶ್ರಮಿಸಿದರು. ಆದರೆ ಎದುರಾಳಿಗೆ ಪ್ರತಿರೋಧ ಒಡ್ಡುವಂತಹ ಪ್ರದರ್ಶನ ನೀಡಲು ಬುಲ್ಸ್‌ನ ಯಾರೊಬ್ಬರಿಗೂ ಸಾಧ್ಯವಾಗಲಿಲ್ಲ. ಆಕಾಶ್ ಶಿಂದೆ, ಆಲ್‌ರೌಂಡರ್ ಧೀರಜ್ ಸೇರಿದಂತೆ ತಂಡದ ಸ್ಟಾರ್ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಗೊಂಡರು. ಪ್ರಥಮಾರ್ಧಕ್ಕೆ 10 ಅಂಕಗಳನ್ನು ಗಳಿಸಿದ ಆಶು ಮಲಿಕ್ ದಿಲ್ಲಿತಂಡದ ಮೇಲುಗೈಗೆ ನೆರವಾದರು.

ಬೆಂಗಳೂರು ಬುಲ್ಸ್ ತನ್ನ ಮುಂದಿನ ಪಂದ್ಯದಲ್ಲಿಸೆಪ್ಟೆಂಬರ್ 5ರಂದು ಯು ಮುಂಬಾ ತಂಡದ ಸವಾಲು ಎದುರಿಸಲಿದೆ.