ಬಳ್ಳಾರಿ, ಬೆಳಗಾವಿ ಬೆನ್ನಲ್ಲೇ ಈಗ ಬೆಂಗಳೂರಿನಲ್ಲೂ ಬಾಣಂತಿ ಸಾವನ್ನಪ್ಪಿರುವ ಪ್ರಕರಣ ವರದಿಯಾಗಿದೆ.
ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅನುಷಾ ಎಂಬ ಬಾಣಂತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅನುಷಾ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ನಾಗರಬಾವಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಅನುಷಾ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅನಿಷಾ ಮೂಲತ: ಕಡೂರು ತಾಲೂಕಿನ ಗರ್ಜೆ ಗ್ರಾಮದವರು. ತರೀಕೆರೆ ರಾಜ್ ನರ್ಸಿಂಗ್ ಹೋಮ್ ನಲ್ಲಿ ನಾರ್ಮಲ್ ಡೆಲಿವರಿ ಆಗಿತ್ತು. ಫ್ರಿ ಡೆಲಿವರಿ ಸ್ಕ್ಯಾನಿಂಗ್ ಮಾಡಿದಾಗ ಸ್ಟೋನ್ ಇದೆ ಎಂದ ವೈದ್ಯರು ಹೇಳಿದ್ದರು.
ಸ್ಕ್ಯಾನಿಂಗ್ ವರದಿಯ ಆಧಾರದ ಮೇಲೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ವೈದ್ಯರು ಯಡವಟ್ಟು ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಪರೇಷನ್ ವೇಳೆ ಕರುಳಿಗೆ ಡ್ಯಾಮೇಜ್ ಆಗಿದ್ದು, ಈ ವಿಷಯವನ್ನು ವೈದ್ಯರು ಮುಚ್ಚಿಟ್ಟಿದ್ದಾರೆ. ಹೀಗಾಗಿ ಬಾಣಂತಿಯ ಕೈನಲ್ಲಿ ಊತ ಕಾಣಿಸಿಕೊಂಡಿದೆ. ಹೀಗಾಗಿ ಮರಳಿ ಆಸ್ಪತ್ರೆಗೆ ಹೋದಾಗ ಏನೂ ಸಮಸ್ಯೆ ಇಲ್ಲ ಎಂದಿದ್ದಾರೆ. ಹೀಗಾಗಿ ಮತ್ತೆ ಕುಟುಂಬಸ್ಥರು ಶಿವಮೊಗ್ಗದ ಸ್ಥಳೀಯ ಆಸ್ಪತ್ರೆಗೆ ಹೋಗಿದ್ದಾರೆ. ಆಗ ಸ್ಥಳೀಯ ವೈದ್ಯರು ಜಾಂಡಿಸ್ ಇದೆ ಎಂದಿದ್ದಾರೆ. ಹೀಗಾಗಿ ಕುಟುಂಬಸ್ಥರು ಬಾಣಂತಿಯನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ. ಆದರೆ ಬೆಂಗಳೂರು ಆಸ್ಪತ್ರೆಯಲ್ಲಿ ದಿನಕ್ಕೊಂದು ಕತೆ ಹೇಳಿ, ಎಲ್ಲ ರೀತಿಯ ಸ್ಕ್ಯಾನಿಂಗ್ ಮಾಡಿದ್ದಾರೆ.
ಗುರುವಾರ ಲಿವರ್ ಪ್ರಾಬ್ಲಂ ಎಂದು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ, ಆಪರೇಷನ್ ಆಗುತ್ತಿದ್ದಂತೆ ಅನುಷಾ ಯಾರೊಂದಿಗೆ ಮಾತನಾಡಿಲ್ಲ. ಆನಂತರ ವೈದ್ಯರು ಹಾರ್ಟ್ ಪ್ರಾಬ್ಲಂ ಎಂದಿದ್ದಾರೆ. ಶಿವಮೊಗ್ಗದಲ್ಲಿ ಒಂದು ಆಪರೇಷನ್ ಆದರೆ, ಶುಕ್ರವಾರ ಬೆಂಗಳೂರಿನಲ್ಲಿ ಆಪರೇಷನ್ ಮಾಡಲಾಗಿದೆ. ಹೀಗಾಗಿ ಅನುಷಾ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.