ನವದೆಹಲಿ : ಭಾರೀ ಹವಾ ಎಬ್ಬಿಸಿರುವ ಬಾಲಿವುಡ್ ನಟ ಸಂಜಯ್ ದತ್ ಹಾಗೂ ನಟಿ ನೋರಾ ಫತೇಹಿ ಹೆಜ್ಜೆ ಹಾಕಿರುವ ‘ಸರ್ಕೇ ಚುನರ್ ತೇರಿ ಸರ್ಕೇ’ (Sarke Chunar Teri Sarke) ಹಾಡಿಗೆ ಇದೀಗ ನಿಷೇಧದ ಭೀತಿ ಎದುರಾಗಿದೆ. ಈ ಹಾಡಿನಲ್ಲಿ ದ್ವಂದ್ವ ಅರ್ಥದ ಪದಗಳ ಬಳಕೆ ಹಾಗೂ ಅಶ್ಲೀಲತೆ ಎದ್ದು ಕಾಣುತ್ತಿದ್ದು, ಇದು ಸಾರ್ವಜನಿಕ ಸಭ್ಯತೆಗೆ ಹಾಗೂ ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆರೋಪಿಸಿ ವಕೀಲರೊಬ್ಬರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ದೂರು ನೀಡಿದ್ದಾರೆ. ಹಾಡನ್ನು ತಕ್ಷಣವೇ ನಿಷೇಧಿಸಿ, ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕುವಂತೆ ಅವರು ಒತ್ತಾಯಿಸಿದ್ದಾರೆ.
ದೂರಿನಲ್ಲೇನಿದೆ?
ವಕೀಲ ವಿನೀತ್ ಜಿಂದಾಲ್ ಅವರು ಸಿಬಿಎಫ್‌ಸಿ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಈ ಕುರಿತು ಅಧಿಕೃತ ದೂರು ಸಲ್ಲಿಸಿದ್ದಾರೆ. ಯೂಟ್ಯೂಬ್ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ಹಾಡಿನಲ್ಲಿ ಅತ್ಯಂತ ಅಸಭ್ಯ, ಲೈಂಗಿಕ ಪ್ರಚೋದಕ ದೃಶ್ಯಗಳು ಹಾಗೂ ಆಕ್ಷೇಪಾರ್ಹ ಸಾಹಿತ್ಯವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಾಡಿನ ನೃತ್ಯ ಸಂಯೋಜನೆ ಹಾಗೂ ಚಿತ್ರೀಕರಣವು ಪ್ರಚೋದನಕಾರಿಯಾಗಿದ್ದು, ಇಂತಹ ಕಂಟೆಂಟ್‌ಗಳು ಅಂತರ್ಜಾಲದಲ್ಲಿ ಸುಲಭವಾಗಿ ಲಭ್ಯವಿರುವುದರಿಂದ ಮಕ್ಕಳ ಮೇಲೆ ಗಂಭೀರ ನಕಾರಾತ್ಮಕ ಪರಿಣಾಮ ಬೀರಲಿವೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಕಠಿಣ ಕ್ರಮಕ್ಕೆ ಮುಂದಾದ ಸೆನ್ಸಾರ್ ಮಂಡಳಿ
ಈ ದೂರಿನ ಬೆನ್ನಲ್ಲೇ ಸೆನ್ಸಾರ್ ಮಂಡಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಗತ್ಯ ಬಿದ್ದರೆ ಚಲನಚಿತ್ರ ಪ್ರಮಾಣೀಕರಣ ನಿಯಮಗಳಿಗೂ ತಿದ್ದುಪಡಿ ತರುವ ಸಾಧ್ಯತೆಯಿದೆ. ಜತೆಗೆ, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಇಂತಹ ಅಶ್ಲೀಲ ಕಂಟೆಂಟ್‌ಗಳ ಮೇಲೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಹದ್ದಿನ ಕಣ್ಣಿಡಲಿದ್ದು, ಕಣ್ಗಾವಲು ವ್ಯವಸ್ಥೆಯನ್ನು ಇನ್ನಷ್ಟು ಚುರುಕುಗೊಳಿಸಲು ನಿರ್ಧರಿಸಿದೆ. ಸಾರ್ವಜನಿಕ ಸಭ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಕಟ್ಟುನಿಟ್ಟಿನ ಹೆಜ್ಜೆ ಇಡಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾನೂನು ಕ್ರಮದ ಎಚ್ಚರಿಕೆ
ಹಾಡಿನ ಪ್ರಮುಖ ರೂವಾರಿಗಳಾದ ನಿರ್ದೇಶಕ ಪ್ರೇಮ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿ ಮಂಗ್ಲಿ ಹಾಗೂ ಗೀತರಚನೆಕಾರ ರಕೀಬ್ ಆಲಂ ಅವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಅಶ್ಲೀಲ ಕಂಟೆಂಟ್ ಪ್ರಸಾರ ಮಾಡುವುದು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 294, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಅಡಿ ದಂಡನೀಯ ಅಪರಾಧವಾಗಿದೆ ಎಂದು ದೂರುದಾರರು ಪ್ರತಿಪಾದಿಸಿದ್ದಾರೆ. ಇದಲ್ಲದೆ, ಈ ಹಾಡಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಸೈಬರ್ ಸೆಲ್‌ನಲ್ಲಿಯೂ ಪ್ರತ್ಯೇಕ ಕ್ರಿಮಿನಲ್ ದೂರು ದಾಖಲಾಗಿದೆ. ಇದೇ ವೇಳೆ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗವು ಕೆಡಿ ತಂಡಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ತಮಿಳುನಾಡಲ್ಲಿ ವಿಜಯ್ ಪಕ್ಷದೊಂದಿಗಿನ ಎನ್‌ಡಿಎ ಮೈತ್ರಿಗೆ ರಜನಿಕಾಂತ್ ವಿವಾದ ಅಡ್ಡಿ!



















