ಚೆನ್ನೈ: ಟಿವಿಕೆ ಮುಖ್ಯಸ್ಥ, ನಟ ವಿಜಯ್ ಅವರ ಜನನಾಯಕನ್ ಚಿತ್ರದ ವಿವಾದದ ನಡುವೆಯೇ ಇದೀಗ ತಮಿಳು ನಟ ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ಚಿತ್ರವು ಬಿಡುಗಡೆಯಾದ ಬೆನ್ನಲ್ಲೇ ವಿವಾದದ ಸುಳಿಗೆ ಸಿಲುಕಿದೆ. ಈ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಮತ್ತು ಕಾಂಗ್ರೆಸ್ ನಾಯಕರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿರುವ ತಮಿಳುನಾಡು ಯುವ ಕಾಂಗ್ರೆಸ್, ಚಿತ್ರವನ್ನು ತಕ್ಷಣವೇ ನಿಷೇಧಿಸಬೇಕೆಂದು ಒತ್ತಾಯಿಸಿದೆ.
ಸುಧಾ ಕೊಂಗರಾ ನಿರ್ದೇಶನದ ಈ ಚಿತ್ರವು 1965ರ ಹಿಂದಿ ವಿರೋಧಿ ಪ್ರತಿಭಟನೆಯ ಹಿನ್ನೆಲೆಯನ್ನು ಹೊಂದಿದೆ. ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಕೆ. ಕಾಮರಾಜ್ ಅವರಂತಹ ರಾಷ್ಟ್ರೀಯ ನಾಯಕರನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂಬುದು ಕಾಂಗ್ರೆಸ್ ಪಕ್ಷದ ಮುಖ್ಯ ಆರೋಪವಾಗಿದೆ. ವಿಶೇಷವಾಗಿ, ಶಿವಕಾರ್ತಿಕೇಯನ್ ಅವರ ಪಾತ್ರವು ಇಂದಿರಾ ಗಾಂಧಿಯವರನ್ನು ಭೇಟಿ ಮಾಡುವ ದೃಶ್ಯವೊಂದರಲ್ಲಿ, ಇಂದಿರಾ ಗಾಂಧಿಯವರನ್ನು ‘ಖಳನಾಯಕಿ’ಯ ರೀತಿಯಲ್ಲಿ ತೋರಿಸಲಾಗಿದೆ ಎಂದು ಯುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇತಿಹಾಸ ತಿರುಚಿದ ಆರೋಪ ಮತ್ತು ಕಾನೂನು ಕ್ರಮದ ಎಚ್ಚರಿಕೆ
ಈ ಕುರಿತು ಹೇಳಿಕೆ ನೀಡಿರುವ ತಮಿಳುನಾಡು ಯುವ ಕಾಂಗ್ರೆಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಅರುಣ್ ಭಾಸ್ಕರ್, “ಪರಾಶಕ್ತಿ ಚಿತ್ರವು ಸಂಪೂರ್ಣವಾಗಿ ಕಲ್ಪಿತ ಕಥೆಯಾಗಿದ್ದು, ಐತಿಹಾಸಿಕ ಸತ್ಯಗಳಿಗೆ ವಿರುದ್ಧವಾಗಿದೆ. ಮೃತಪಟ್ಟ ರಾಷ್ಟ್ರೀಯ ನಾಯಕರನ್ನು ಇತಿಹಾಸದಲ್ಲಿ ನಡೆಯದ ಘಟನೆಗಳಲ್ಲಿ ಸೇರಿಸಿ ಕಾಲ್ಪನಿಕವಾಗಿ ಚಿತ್ರಿಸುವುದು ಕಾನೂನುಬಾಹಿರ. ಈ ಚಿತ್ರತಂಡಕ್ಕೆ ಇತಿಹಾಸದ ಅರಿವಿಲ್ಲದೆ ದೃಶ್ಯಗಳನ್ನು ಸೃಷ್ಟಿಸಿದೆ,” ಎಂದು ಕಿಡಿಕಾರಿದ್ದಾರೆ. ಇತಿಹಾಸಕ್ಕೆ ವಿರುದ್ಧವಾಗಿರುವ ದೃಶ್ಯಗಳನ್ನು ಕೂಡಲೇ ತೆಗೆದುಹಾಕಬೇಕು ಮತ್ತು ಚಿತ್ರತಂಡ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅನೇಕ ದಿನಗಳಿಂದ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದ ಈ ಚಿತ್ರವು, ಕೊನೆಗೂ ಹಲವು ಕತ್ತರಿಗಳ ನಂತರ ಕಳೆದ ವಾರ ಬಿಡುಗಡೆಯಾಗಿತ್ತು. ಸೆನ್ಸಾರ್ ಮಂಡಳಿಯು ಈ ಪಿರಿಯಡ್ ಡ್ರಾಮಾದಲ್ಲಿ ಸುಮಾರು 25 ಬದಲಾವಣೆಗಳನ್ನು ಸೂಚಿಸಿದ ನಂತರವಷ್ಟೇ ಜನವರಿ 10 ರಂದು ಚಿತ್ರ ತೆರೆಕಂಡಿತ್ತು. ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೊತೆಗೆ ಶ್ರೀಲೀಲಾ ಮತ್ತು ರವಿ ಮೋಹನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗ ಕಾಂಗ್ರೆಸ್ ಪಕ್ಷವು #BanParasakthiMovie ಎಂಬ ಹ್ಯಾಶ್‌ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ವಿರುದ್ಧ ಅಭಿಯಾನವನ್ನು ತೀವ್ರಗೊಳಿಸಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್‌ನಲ್ಲಿ ಅಶ್ಲೀಲ ಕಂಟೆಂಟ್ | ಚಿತ್ರದ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು!



















