ಕನ್ನಡಿಗರ ಬಗ್ಗೆ ಹಗುರ ಮಾತುಗಳನ್ನಾಡಿದ್ದ ಗಾಯಕ ಸೋನು ನಿಗಮ್ ವಿರುದ್ಧ ಚಿತ್ರರಂಗ ಬ್ಯಾನ್ ಅಸ್ತ್ರ ಪ್ರಯೋಗಿಸಿದೆ. ಇನ್ನೇನು ರಿಲೀಸ್ ಗೆ ಸಜ್ಜಾಗಿರುವ ನಿದ್ರಾದೇವಿ ನೆಕ್ಸ್ಟ್ ಡೋರ್ ಚಿತ್ರದಲ್ಲಿ ಸೋನು ನಿಗಮ್ ಹಾಡಿರೋ ಒಂದು ಸಾಂಗ್ ಇದೆ.
ನೀ ನನ್ನ ಒಲವೇ ಅನ್ನೋ ಹಾಡಿಗೆ ಸೋನು ನಿಗಮ್ ಧ್ವನಿಯಾಗಿದ್ದಾರೆ. ಆದರೆ ಅವರ ಕನ್ನಡ ವಿರೋಧಿ ಮಾತುಗಳ ಹಿನ್ನಲೆಯಲ್ಲಿ ಆ ಗೀತೆಯನ್ನೀಗ ಕನ್ನಡಿಗ ಗಾಯಕರಿಂದಲೇ ಮರು ಮುದ್ರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ನಿರ್ದೇಶಕ ಸುರಾಗ್ ಸಾಗರ್, ನಮಗೆ ಕನ್ನಡವೇ ಉಸಿರು ಹೀಗಾಗಿ ಸೋನು ನಿಗಮ್ ಕನ್ನಡಿಗರಿಗೆ ಮಾಡಿದ ಅಪಮಾನವನ್ನು ಸಹಿಸುವುದಕ್ಕೆ ಆಗುವುದಿಲ್ಲ.
ಹೀಗಾಗಿ ನಮ್ಮ ಚಿತ್ರದ ಓ ನನ್ನ ಜೀವವೇ ಹಾಡಿನಲ್ಲಿ ಮುಂದೆ ಸೋನು ನಿಗಮ್ ರ ಕಂಠ ಇರುವುದಿಲ್ಲ. ಬದಲಿಗೆ ಕನ್ನಡಿಗ ಗಾಯಕರೊಬ್ಬರಿಂದಲೇ ಹಾಡನ್ನು ಮತ್ತೊಮ್ಮೆ ಹಾಡಿಸಿ ಸಿನಿಮಾ ಬಿಡುಗಡೆಗೂ ಮುನ್ನ ರಿಲೀಸ್ ಮಾಡ್ತೀವಿ ಅಂತಾ ಸುರಾಗ್ ಘೋಷಿಸಿದ್ದಾರೆ.
ಈ ಚಿತ್ರದಲ್ಲಿ ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ನಾಯಕನಾಗಿ ನಟಿಸುತ್ತಿದ್ದರೆ ರಿಷಿಕಾ ನಾಯ್ಕ್ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸೋನುಗೆ ಅಭಿಮಾನಿಗಳು ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದರು. ಈ ವೇಳೆ ಪ್ರತ್ರಿಯಿಸಿದ್ದ ಸೋನು, ಹೀಗೆ ಕನ್ನಡ ಕನ್ನಡ ಎಂದೇ ಪಹಲ್ಗಾಮ್ ದಾಳಿ ಆಯ್ತು ಅಂದಿದ್ದರು. ಕನ್ನಡಿಗರನ್ನು ಉಗ್ರರಿಗೆ ಹೋಲಿಸಿದ್ರು ಅಂತಾ ಕನ್ನಾಡಭಿಮಾನಿಗಳು ಬ್ಯಾನ್ ಸೋನು ನಿಗಮ್ ಅಭಿಯಾನ ಆರಂಭಿಸಿದ್ರು. ಈ ನಡುವೆ ಅವರು ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ರೂ ಕಲಾ ರಸಿಕರ ಕೋಪವಿನ್ನೂ ತಣ್ಣಗಾಗಿಲ್ಲ. ಹೀಗಾಗಿಯೇ ನಿದ್ರಾದೇವಿ ನೆಕ್ಸ್ಟ್ ಡೋರ್ ಸಿನಿಮಾದಿಂದ ಸೋನು ಕಂಠವನ್ನೀಗ ಕಿಕ್ ಔಟ್ ಮಾಡಲಾಗಿದೆ.



















