ನವದೆಹಲಿ: ಹಿಂದೂಯೇತರರು ಉತ್ತರಾಖಂಡದ ಪ್ರಸಿದ್ಧ ಕೇದಾರನಾಥ(Kedarnath) ದೇಗುಲದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಲು ಯತ್ನಿಸುತ್ತಿದ್ದಾರೆ. ಹೀಗಾಗಿ ಕೇದಾರನಾಥಕ್ಕೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಬೇಕು ಎಂದು ಬಿಜೆಪಿ ನಾಯಕಿ, ಕೇದಾರನಾಥ ಶಾಸಕಿ ಆಶಾ ನೌಟಿಯಾಲ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, “ನಾನು ಸ್ಥಳೀಯರೊಂದಿಗೆ ಸಭೆ ನಡೆಸಿದಾಗ, ಹಿಂದೂಯೇತರರು ಅಲ್ಲಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಬಗ್ಗೆ ಅವರು ನನಗೆ ಮಾಹಿತಿ ನೀಡಿದ್ದಾರೆ. ಪ್ರಪಂಚದಾದ್ಯಂತದ ಜನರು ಬಾಬಾ ಕೇದಾರನನ್ನು ಪೂಜಿಸಲು ಬರುತ್ತಾರೆ. ಹೀಗಾಗಿ ಹಿಂದೂಯೇತರರು ಇಲ್ಲಿಗೆ ಬರದಂತೆ ನಿಷೇಧಿಸಬೇಕು” ಎಂದು ಹೇಳಿದ್ದಾರೆ. ಹಿಂದೂ ಧಾರ್ಮಿಕ ಕೇಂದ್ರಗಳ ಆಸುಪಾಸಿನಲ್ಲಿ ಮಾಂಸ ಮತ್ತು ಮದ್ಯ ಮಾರಾಟ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಶಾಸಕಿ ಆಶಾ ನೌಟಿಯಾಲ್ ಈ ಹೇಳಿಕೆ ನೀಡಿದ್ದಾರೆ. ಜತೆಗೆ ನಾನು ಇಲ್ಲಿಯ ಶಾಸಕಿಯಾಗಿರುವ ಕಾರಣ ಈ ಬಗ್ಗೆ ಧ್ವನಿಯೆತ್ತುವುದು ನನ್ನ ಕರ್ತವ್ಯವೂ ಹೌದು ಎಂದಿದ್ದಾರೆ. ಚಾರ್ ಧಾಮ್ ಯಾತ್ರೆಯ ಭಾಗವಾಗಿರುವ ಎಲ್ಲ ಸ್ಥಳಗಳಿಗೂ ಹಿಂದೂಯೇತರರನ್ನು ನಿರ್ಬಂಧಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ಶಾಸಕಿ ನೌಟಿಯಾಲ್ ಅವರ ಈ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದು ದ್ವೇಷವನ್ನು ಹರಡುವ ಪ್ರಯತ್ನವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ಸೂರ್ಯಕಾಂತ್ ದಸ್ಮಾನ ಮಾತನಾಡಿ, “ಮಹಾ ಕುಂಭ, ಹೋಳಿ, ಜುಮ್ಮಾ ಕಿ ನಮಾಜ್ ಆಗಿರಲೀ, ಚಾರ್ ಧಾಮ್ ಯಾತ್ರೆಯಾಗಿರಲಿ… ಪ್ರತಿ ಬಾರಿ ಎಲ್ಲ ಕಡೆಯೂ ಕೋಮು ಸೌಹಾರ್ದತೆಯನ್ನು ಭಂಗಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಪದೇ ಪದೇ ಗುರಿಯಾಗಿಸಲಾಗುತ್ತಿದೆ. ಇದು ಅವರ ರಾಷ್ಟ್ರೀಯ ಕಾರ್ಯಸೂಚಿಯಾಗಿದೆ” ಎಂದು ಆರೋಪಿಸಿದ್ದಾರೆ.
ನಿರುದ್ಯೋಗ ಮತ್ತು ಹಣದುಬ್ಬರದಂತಹ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ, ಹಿಂದುತ್ವದ ಸಿದ್ಧಾಂತ ಹೊಂದಿರುವ ಪಕ್ಷವು ಎಲ್ಲವನ್ನೂ ಧರ್ಮದೊಂದಿಗೆ ಜೋಡಿಸುತ್ತಿದೆ. ಸಂವೇದನಾಶೀಲ ಹೇಳಿಕೆಗಳನ್ನು ನೀಡುವುದು ಬಿಜೆಪಿ ನಾಯಕರ ಅಭ್ಯಾಸ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಹರೀಶ್ ರಾವತ್ ಟೀಕಿಸಿದ್ದಾರೆ. ಅಲ್ಲದೇ “ಉತ್ತರಾಖಂಡವು ದೇವಭೂಮಿಯಾಗಿದೆ. ನೀವು ಎಷ್ಟು ಕಾಲ ಎಲ್ಲವನ್ನೂ ಧರ್ಮದೊಂದಿಗೆ ಜೋಡಿಸುತ್ತೀರಿ? ಈ ರೀತಿಯ ಹೇಳಿಕೆ ನೀಡಿ ಸಮಾಜವನ್ನು ಒಡೆಯುವುದು ಎಷ್ಟು ಸರಿ” ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಉತ್ತರಾಖಂಡ ಘಟಕದ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್ ಮಾತನಾಡಿ, ಶಾಸಕಿ ನೌಟಿಯಾಲ್ ಅವರ ಹೇಳಿಕೆಯನ್ನು ಪಕ್ಷವು ಬೆಂಬಲಿಸುತ್ತದೆ. ಏಕೆಂದರೆ ಇದು ಹಿಂದೂ ಧರ್ಮದ ಭಾವನೆಗಳಿಗೆ ಸಂಬಂಧಿಸಿದ ವಿಚಾರ ಎಂದಿದ್ದಾರೆ. “ಚಾರ್ ಧಾಮ್ ಯಾತ್ರೆಗೆ ಸನಾತನ ಧರ್ಮದಲ್ಲಿ ತನ್ನದೇ ಆದ ಮಹತ್ವವಿದೆ. ಜನರು ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಈ ತೀರ್ಥಯಾತ್ರೆಯನ್ನು ಕೈಗೊಳ್ಳುತ್ತಾರೆ. ಅವರ ಧಾರ್ಮಿಕ ಭಾವನೆಗಳಿಗೆ ಎಂದೂ ಧಕ್ಕೆ ಆಗಬಾರದು” ಎಂದು ಚೌಹಾಣ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ಮುಸ್ಲಿಮರು ಮಾಂಸ ಮತ್ತು ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೇದಾರನಾಥದ ವ್ಯಾಪಾರಸ್ಥರು ಆರೋಪಿಸಿದ್ದಾರೆ. ಈ ಪವಿತ್ರ ಸ್ಥಾನದಲ್ಲಿ ಇಂತಹ ವ್ಯವಹಾರಗಳನ್ನು ನಡೆಸುವುದು ತಪ್ಪು. ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ಉತ್ತರಾಖಂಡದಲ್ಲಿರುವ ಕೇದಾರನಾಥ, ಬದರೀನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಎಂಬ ನಾಲ್ಕು ದೇವಾಲಯಗಳಿಗೆ ಮಾಡುವ ತೀರ್ಥಯಾತ್ರೆಯನ್ನು ಚಾರ್ ಧಾಮ್ ಯಾತ್ರೆ ಎಂದು ಕರೆಯಲಾಗುತ್ತದೆ. ಏಪ್ರಿಲ್ 30 ರಂದು ಗಂಗೋತ್ರಿ ಮತ್ತು ಯಮುನೋತ್ರಿ ತೆರೆಯಲಿದ್ದು, ಮೇ 2 ರಂದು ಕೇದಾರನಾಥ ಮತ್ತು ಮೇ 4 ರಂದು ಬದರೀನಾಥ್ ತೆರೆಯಲಿದೆ. ಇದಕ್ಕೂ ಮುನ್ನವೇ ಬಿಜೆಪಿ ಶಾಸಕಿ ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.