ಬೆಂಗಳೂರು : ಸ್ಥಳೀಯ ಚುನಾವಣೆಗೆ ಮತಪತ್ರ ಬಳಕೆ ಮಾಡುವುದಕ್ಕೆ ಸಂಬಂಧಿಸಿದಂತೆ ನಿನ್ನೆ (ಗುರುವಾರ) ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ. ಇದಕ್ಕೆ ಬಿಜೆಪಿ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧಿಸಿದಂತೆ ಡಿಸಿಎಂ ಡಿಕೆಶಿ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕರ್ನಾಟಕ ಸರ್ಕಾರದ ಒಂದು ತೀರ್ಮಾನ ಬಿಜೆಪಿಗೆ ಯಾಕೆ ಆತಂಕಪಡುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡುವುದಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ. ಅವರೇ(ಬಿಜೆಪಿ) ಮಾಡಿರುವ ಕಾನೂನಿದು. ಅವರ ಆಡಳಿತಾವಧಿಯಲ್ಲಿ ಈ ಕಾನೂನನ್ನು ತಂದಿದ್ದಾರೆ. ಬ್ಯಾಲೇಟ್ ಪೇಪರ್ ಅಥವಾ ಇವಿಎಂ ಬಳಸಿಕೊಳ್ಳಬಹುದು ಎಂದು ಅವರೇ ಕಾನೂನು ತಂದಿದ್ದಾರೆ ಎಂದು ಹೇಳಿದ್ದಾರೆ.
ನಾವು ಸ್ಥಳೀಯ ಸಂಸ್ಥೆಗಳು ಚುನಾವಣೆಯಲ್ಲಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಬಿಜೆಪಿಯವರಿಗೆ ಯಾಕೆ ಗಾಬರಿ ? “ಕಳ್ಳನ ಮನಸ್ಸು ಹುಳ್ ಹುಳ್” ಎಂದಂತೆ ಎಲ್ಲೋ ನೋಡಿಕೊಳ್ಳುತ್ತಿದ್ದೀರಿ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸೊಸೈಟಿಗಳಿಗೆ ಚುನಾವಣೆ ನಡೆಸಿದಂತೆ ಚುನಾವಣೆ ಮಾಡಬೇಕಿದೆ ಎಂದಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಚುನಾವಣೆ ಆಯೋಗ ಏನು ಮಾಡಬೇಕೆನ್ನುವುದನ್ನು ಅವರು ತೀರ್ಮಾನ ಮಾಡುತ್ತಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ರಾಜ್ಯ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಅವರು ಹೇಳಿದ್ದಾರೆ.