ಬೆಂಗಳೂರು: ಬಜಾಜ್ ಆಟೋ ತನ್ನ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ‘ಚೇತಕ್’ ಮಾರಾಟದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. 2020ರ ಜನವರಿಯಲ್ಲಿ ಮಾರುಕಟ್ಟೆಗೆ ಬಂದಾಗಿನಿಂದ ಇಲ್ಲಿಯವರೆಗೆ 5,10,000ಕ್ಕೂ ಅಧಿಕ ಚೇತಕ್ ಸ್ಕೂಟರ್ಗಳು ಮಾರಾಟವಾಗಿವೆ. ವಿಶೇಷವಾಗಿ, ಕಳೆದ 10 ತಿಂಗಳಲ್ಲಿ ಮಾರಾಟವು ಗಮನಾರ್ಹವಾಗಿ ಏರಿಕೆ ಕಂಡಿದ್ದು, ಈ ಅವಧಿಯಲ್ಲಿಯೇ 2,06,366 ಯುನಿಟ್ಗಳು ಗ್ರಾಹಕರ ಕೈ ಸೇರಿವೆ.
ಚೇತಕ್ ತನ್ನ ಮೊದಲ 1 ಲಕ್ಷ ಯುನಿಟ್ಗಳ ಮಾರಾಟದ ಗುರಿ ತಲುಪಲು 46 ತಿಂಗಳುಗಳನ್ನು ತೆಗೆದುಕೊಂಡಿತ್ತು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಇದರ ಬೇಡಿಕೆ ತೀವ್ರಗತಿಯಲ್ಲಿ ಹೆಚ್ಚಾಗಿದೆ. ಇತ್ತೀಚೆಗೆ ‘ರೇರ್-ಅರ್ತ್’ ಮ್ಯಾಗ್ನೆಟ್ ಕೊರತೆಯಿಂದಾಗಿ ಉತ್ಪಾದನೆಯಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಿದ್ದರೂ, ಬಜಾಜ್ ಈ ಸವಾಲನ್ನು ಮೆಟ್ಟಿ ನಿಂತು ಮಾರಾಟದಲ್ಲಿ ದಾಖಲೆ ಬರೆದಿದೆ. ಭಾರತದ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ಗಳ ಪಟ್ಟಿಯಲ್ಲಿ ಚೇತಕ್ ಸತತವಾಗಿ ಸ್ಥಾನ ಪಡೆದಿದ್ದು, ಟಿವಿಎಸ್ ಐಕ್ಯೂಬ್ಗೆ ತೀವ್ರ ಪೈಪೋಟಿ ನೀಡುತ್ತಿದೆ. ಸದ್ಯ ಉತ್ಪಾದನೆ ಸಹಜ ಸ್ಥಿತಿಗೆ ಮರಳಿದ್ದು, ಮುಂದಿನ ದಿನಗಳಲ್ಲಿ ಮಾರಾಟ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
ಈ ಯಶಸ್ಸಿನ ಹಿಂದೆ ಬಜಾಜ್ನ ಕಾರ್ಯತಂತ್ರ ಅಡಗಿದೆ. ಚೇತಕ್ ಶ್ರೇಣಿಯಲ್ಲಿ ಹಲವು ಮಾದರಿಗಳನ್ನು ಪರಿಚಯಿಸಿದ್ದು ಮತ್ತು ದೇಶಾದ್ಯಂತ 3,800ಕ್ಕೂ ಅಧಿಕ ಸರ್ವಿಸ್ ಕೇಂದ್ರಗಳ ವ್ಯಾಪಕ ಜಾಲವನ್ನು ಹೊಂದಿರುವುದು ಗ್ರಾಹಕರನ್ನು ಆಕರ್ಷಿಸಲು ಪ್ರಮುಖ ಕಾರಣವಾಗಿದೆ. ಏಪ್ರಿಲ್ 2024ರಿಂದ ಈಚೆಗೆ 20 ತಿಂಗಳಲ್ಲಿ 3,48,251 ಚೇತಕ್ಗಳು ಮಾರಾಟವಾಗಿದ್ದರೆ, ಕೊನೆಯ 2 ಲಕ್ಷ ಯುನಿಟ್ಗಳು ಕೇವಲ 10 ತಿಂಗಳೊಳಗೆ ಮಾರಾಟವಾಗಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಪ್ರಸ್ತುತ, ಬಜಾಜ್ ಚೇತಕ್ ಪೋರ್ಟ್ಫೋಲಿಯೊದಲ್ಲಿ ಎರಡು ಬ್ಯಾಟರಿ ಕಾನ್ಫಿಗರೇಶನ್ಗಳಲ್ಲಿ ನಾಲ್ಕು ಮಾದರಿಗಳು ಲಭ್ಯವಿವೆ. ‘ಚೇತಕ್ 3001’ ಮಾದರಿಯು 3kWh ಬ್ಯಾಟರಿ ಹೊಂದಿದ್ದರೆ, ‘3501’, ‘3502’ ಮತ್ತು ‘3503’ ಮಾದರಿಗಳು 3.5kWh ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತವೆ. ಈ ಸ್ಕೂಟರ್ಗಳ ಎಕ್ಸ್ ಶೋರೂಂ ಬೆಲೆ 99,900 ರೂಪಾಯಿಗಳಿಂದ ಆರಂಭವಾಗಿ 1.35 ಲಕ್ಷ ರೂಪಾಯಿಗಳವರೆಗೆ ಇದೆ.


















