ರಾಜ್ಯ ಬಿಜೆಪಿಯಲ್ಲಿ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ, ಇಡೀ ಸಂಘಟನೆಯಲ್ಲಿ ಭಾರೀ ಬದಲಾವಣೆ ನಿರೀಕ್ಷೆಯಿದೆ. ತೆರೆಮರೆಯಲ್ಲಿ ಮಂಡಲ್ ಅಧ್ಯಕ್ಷರಾಗಲು ಅನೇಕ ನಾಯಕರು ಕಸರತ್ತು ಆರಂಭಿಸಿದ್ದಾರೆ. ಮಾಜಿ ಶಾಸಕರುಗಳಿಂದ ಮಂಡಲ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಡಲಾಗಿದೆ.
ಮಂಡಲ್ ಅಧ್ಯಕ್ಷ ಅಂದರೆ, ಪ್ರತಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನ. ಮುಂದೆ 2028 ರಲ್ಲಿ ಎದುರಾಗಲಿರುವ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ (Assembly Constituency) ಚುನಾವಣೆಯಲ್ಲಿ ಹಿಡಿತ ಸಾಧಿಸಬೇಕು ಅಂದರೆ, ಕ್ಷೇತ್ರದಲ್ಲಿ ತಮ್ಮದೇ ಆದ ಅಧ್ಯಕ್ಷರಿರಬೇಕು. ಅಧ್ಯಕ್ಷರ ಮೂಲಕವೇ ಪ್ರತಿ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಆಗಲಿದೆ.
ಹೀಗಾಗಿ ಮಾಜಿ ಶಾಸಕರುಗಳಿಂದ ಮಂಡಲ್ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಶುರುವಾಗಿದೆ. ತಾವೇ ಮಂಡಲ್ ಅಧ್ಯಕ್ಷರಾಗುವುದು ಅಥವಾ ತಮ್ಮ ಕಡೆಯವರಿಗೆ ಸಂಘಟನೆಯಲ್ಲಿ ಮಂಡಲ್ ಅಧ್ಯಕ್ಷರಾಗಿ ಮಾಡುವುದು. ಆ ಮೂಲಕ ಮುಂದೆ ಎದುರಾಗಲಿರುವ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ತಾವೇ ಅಭ್ಯರ್ಥಿ ಆಗಬೇಕೆಂದು ಮಾಸ್ಟರ್ ಪ್ಲಾನ್ ರೂಪಿಸಿಕೊಂಡಿದ್ದಾರೆ.
ಈಗಾಗಲೇ ಬಿಜೆಪಿಯಲ್ಲಿ 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 23 ಸಂಘಟನಾತ್ಮಕ ಜಿಲ್ಲೆಗೆ ಜಿಲ್ಲಾಧ್ಯಕ್ಷರ ನೇಮಕವಾಗಿದ್ದು, ಜಿಲ್ಲಾಧ್ಯಕ್ಷರ ನೇಮಕ ಆಗಿರುವ ಬೆನ್ನಲ್ಲೇ ಮಂಡಲ್ ಅಧ್ಯಕ್ಷ ಸ್ಥಾನದ ಮೇಲೆ ನಾಯಕರುಗಳ ಲಾಬಿ ಆರಂಭವಾಗಿದೆ.