ಭಿಲ್ವಾರಾ: ರಾಜಸ್ಥಾನದ ಭಿಲ್ವಾರಾ ಅರಣ್ಯ ಪ್ರದೇಶದಲ್ಲಿ ನವಜಾತ ಶಿಶುವಿನ ತುಟಿಗಳಿಗೆ ಗಮ್ ಹಾಕಿ, ಬಾಯಿಯಲ್ಲಿ ಕಲ್ಲು ತುರುಕಿ ಕ್ರೂರವಾಗಿ ಎಸೆದು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಗುವಿನ ತಾಯಿ ಮತ್ತು ಆಕೆಯ ತಂದೆಯನ್ನು (ಮಗುವಿನ ತಾತ) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡು ದಿನಗಳ ಹಿಂದೆ ಈ 19 ದಿನಗಳ ಮಗು ಅರಣ್ಯದೊಳಗೆ ಪತ್ತೆಯಾಗಿತ್ತು.
ಈ ಮಗು ಅಕ್ರಮ ಸಂಬಂಧದಿಂದ ಜನಿಸಿದ್ದು, ಸಮಾಜಕ್ಕೆ ಹೆದರಿದ ಮಹಿಳೆ ಮತ್ತು ಆಕೆಯ ತಂದೆ, ನಕಲಿ ಗುರುತಿನ ಚೀಟಿ ಬಳಸಿ ಬುಂದಿ ಎಂಬಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ಹೆರಿಗೆ ಮಾಡಿಸಿದ್ದಾರೆ. ನಂತರ ಮಗುವನ್ನು ಮಾರಾಟ ಮಾಡಲು ಪ್ರಯತ್ನಿಸಿ, ಅದು ವಿಫಲವಾದಾಗ ಮಗುವನ್ನು ಕಾಡಿನಲ್ಲಿ ಎಸೆದು ಹೋಗಿದ್ದಾರೆ. ಮಗು ಅಳದಂತೆ ತಡೆಯಲು ಅದರ ಬಾಯಿಗೆ ಕಲ್ಲು ತುರುಕಲಾಗಿತ್ತು ಮತ್ತು ಎರಡೂ ತುಟಿಗಳಿಗೆ ಗಮ್ ಹಾಕಿ ಅಂಟಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
“ಖಚಿತ ಮಾಹಿತಿ ಆಧರಿಸಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆಕೆ ಅಕ್ರಮ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ್ದು, ಬಳಿಕ ಮಗುವನ್ನು ತೊರೆದಿರುವುದು ತಿಳಿದುಬಂದಿದೆ” ಎಂದು ಭಿಲ್ವಾರಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ. ಮಗುವಿನ ಸಂಬಂಧವನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಮಗು ಪತ್ತೆಯಾಗಿದ್ದು ಹೇಗೆ?
ಮಂಡಲಗಢದಲ್ಲಿ ಕುರಿ ಕಾಯುತ್ತಿದ್ದ ಕುರಿಗಾಹಿಯೊಬ್ಬರಿಗೆ ಮಗುವಿನ ಕ್ಷೀಣ ಅಳು ಕೇಳಿಸಿದೆ. ತಕ್ಷಣ ಅವರು ಪೊಲೀಸರು ಮತ್ತು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ರಕ್ಷಿಸಿ, ಮಹಾತ್ಮ ಗಾಂಧಿ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ್ದರು.
ಸದ್ಯ ಮಗು ವೈದ್ಯರ ಆರೈಕೆಯಲ್ಲಿದ್ದು, ಆರೋಗ್ಯ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಆದಾಗ್ಯೂ, ಮಗುವಿನ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. “ಮಗುವಿಗೆ ಉಸಿರಾಟದ ತೊಂದರೆಯಿರುವುದರಿಂದ ಆಮ್ಲಜನಕದ ಬೆಂಬಲದಲ್ಲಿ ಇರಿಸಲಾಗಿದೆ. ಬಿಸಿ ಕಲ್ಲುಗಳ ಸಂಪರ್ಕಕ್ಕೆ ಬಂದಿದ್ದರಿಂದ ಅದಕ್ಕೆ ಸುಟ್ಟ ಗಾಯಗಳೂ ಆಗಿವೆ” ಎಂದು ಭಿಲ್ವಾರಾ ವೈದ್ಯಕೀಯ ಕಾಲೇಜಿನ ತಾಯಿ ಮತ್ತು ಮಕ್ಕಳ ಕೇಂದ್ರದ ಉಸ್ತುವಾರಿ ಡಾ. ಇಂದ್ರಾ ಸಿಂಗ್ ಮಾಹಿತಿ ನೀಡಿದ್ದಾರೆ.