‘
ಬ್ರಿಸ್ಬೇನ್: ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಟಿ20ಐ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಕೇವಲ 26 ಎಸೆತಗಳಲ್ಲಿ 53 ರನ್ ಗಳಿಸಿದ ಬ್ರೆವಿಸ್, ತಮ್ಮ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು ಒಂದು ಬೌಂಡರಿಗಳನ್ನು ಸಿಡಿಸಿ ಮಿಂಚಿದ್ದಾರೆ. ಅವರ ಈ ಸ್ಫೋಟಕ ಬ್ಯಾಟಿಂಗ್, ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರ ದೀರ್ಘಕಾಲಿಕ ದಾಖಲೆಯೊಂದನ್ನು ಮುರಿದಿದೆ.
ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 7ನೇ ಓವರ್ ವೇಳೆಗೆ ಕೇವಲ 49 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್‌ಗೆ ಬಂದ ಬ್ರೆವಿಸ್, ಆಲ್ ರೌಂಡರ್ ಟ್ರಿಸ್ಟನ್ ಸ್ಟಬ್ಸ್ ಜೊತೆಗೂಡಿ 29 ಎಸೆತಗಳಲ್ಲಿ 61 ರನ್‌ಗಳ ಅಮೂಲ್ಯ ಜೊತೆಯಾಟ ಆಡಿದರು. ಅವರ ಈ ಅದ್ಭುತ ಅರ್ಧಶತಕದಿಂದಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್‌ಗಳ ಸವಾಲಿನ ಗುರಿ ನೀಡಲು ಸಾಧ್ಯವಾಯಿತು.
ಸರಣಿಯ ಅಂತಿಮ ಪಂದ್ಯದಲ್ಲಿ ಸಿಡಿಸಿದ 6 ಸಿಕ್ಸರ್‌ಗಳೊಂದಿಗೆ, ಬ್ರೆವಿಸ್ ಈ ಸರಣಿಯಲ್ಲಿ ಒಟ್ಟು 14 ಸಿಕ್ಸರ್‌ಗಳನ್ನು ಸಿಡಿಸಿ ಹೊಸ ಮೈಲಿಗಲ್ಲು ತಲುಪಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ ಕಾಂಗರೂ ನಾಡಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ವಿರಾಟ್ ಕೊಹ್ಲಿ 10 ಇನ್ನಿಂಗ್ಸ್‌ಗಳಲ್ಲಿ 12 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದಲ್ಲದೆ, ಈ ಸರಣಿಯಲ್ಲಿ ಬ್ರೆವಿಸ್ ಮೂರು ಪಂದ್ಯಗಳಲ್ಲಿ ಒಟ್ಟು 180 ರನ್ ಕಲೆಹಾಕಿ, ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಸರಣಿ ಗೆದ್ದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿತ್ತು. ನಿರ್ಣಾಯಕ ಪಂದ್ಯದಲ್ಲಿ 173 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ತಂಡಕ್ಕೆ 63 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



















