ದೇಶದಲ್ಲಿ ತಿರುಮಲ ತಿರುಪತಿ ಅತ್ಯಂತ ಶ್ರೀಮಂತ ದೇವಾಲಯ. ಅದರ ನಂತರದ ಸ್ಥಾನ ಮಹಾರಾಷ್ಟ್ರದ ಶಿರಡಿ ಕ್ಷೇತ್ರ ಶ್ರೀಮಂತ ಎಂದು ಗುರುತಿಸಿಕೊಂಡಿದೆ. ಗುರು ಪೂರ್ಣಿಮೆಯಂದು ಶಿರಡಿಗೆ ಹೆಚ್ಚಿನ ಭಕ್ತರು ಆಗಮಿಸಿದ್ದು, ಬಾಬಾನ ಕಾಣಿಕೆ ಪೆಟ್ಟಿಗೆ ತುಂಬಿ ತುಳುಕಿದೆ ಎನ್ನಲಾಗಿದೆ.
ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೌರ್ಣಮಿ ಆಚರಿಸಲಾಗುತ್ತದೆ. ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಇದೇ 20ರಂದು ಆರಂಭವಾದ ಗುರು ಪೌರ್ಣಮಿ ಮಹೋತ್ಸವು ಮೂರು ದಿನಗಳ ಕಾಲ ನಡೆಯಿತು. ಭಕ್ತರು ಸಾಯಿಬಾಬಾಗೆ ವಿವಿಧ ದೇಣಿಗೆ ನೀಡಿದ್ದು, ಶಿರಡಿ ಸಾಯಿಬಾಬಾ 6 ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹಿಸಿದ್ದಾರೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಸಿಇಒ ಗೋರಕ್ಷಾ ಗಾಡಿಲ್ಕರ್ ಹೇಳಿದ್ದಾರೆ.
ಗುರು ಪೌರ್ಣಮಿಯಂದು ಶಿರಡಿಗೆ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಜನ ಭಕ್ತರು ಬಂದಿದ್ದರು ಎನ್ನಲಾಗಿದೆ. ಗುರು ಪೂರ್ಣಿಮೆ ನಿಮಿತ್ತ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ರೂ. 2 ಕೋಟಿ 50 ಲಕ್ಷ ರೂ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಮೂಲಕ, ಆನ್‌ಲೈನ್‌ನಲ್ಲಿ 1 ಕೋಟಿಗೂ ಹೆಚ್ಚು ದೇಣಿಗೆ, ಚೆಕ್ ಗಳು, ಮನಿ ಆರ್ಡರ್ ಗಳ ಮೂಲಕ ಸುಮಾರು 2 ಕೋಟಿ ರೂ. ಕಾಣಿಕೆ ಬಂದಿದೆ. ಕೆಲವು ಭಕ್ತರು ಚಿನ್ನ ಬೆಳ್ಳಿ ಕಾಣಿಕೆ ನೀಡಿದ್ದಾರೆ. ವಿಶೇಷ ದರ್ಶನಕ್ಕೆ ರೂ. 200 ಟಿಕೆಟ್ ನೀಡಿದ್ದು, ಲಡ್ಡು ಕವರ್ ಮಾರಾಟದ ಮೂಲಕ 62 ಲಕ್ಷ ರೂ.ಗೂ ಹೆಚ್ಚು ಆದಾಯ ಬಂದಿದೆ. ಅಂದು ಸಾಯಿ ಪ್ರಸಾದಾಲಯದಲ್ಲಿ 1 ಲಕ್ಷ 90 ಸಾವಿರ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ.
ಗುರು ಪೂರ್ಣಿಮೆ ಆಚರಣೆಯ ಮೂರು ದಿನಗಳಿಂದ ಶಿರಡಿ ಪಟ್ಟಣವು ಭಕ್ತರಿಂದ ತುಂಬಿ ತುಳುಕುತ್ತಿತ್ತು. ವಿದೇಶಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಶಿರಡಿಗೆ ಭೇಟಿ ನೀಡುವ ಭಕ್ತರಿಗೆ ಹೆಚ್ಚಿನ ಆನಂದ ನೀಡಲು ಥೀಮ್ ಪಾರ್ಕ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಶಿರಡಿ ನಗರದಲ್ಲಿ 22 ಎಕರೆ ಪ್ರದೇಶದಲ್ಲಿ ಯೋಜನೆ ನಿರ್ಮಾಣವಾಗಲಿದೆ.