ಹತ್ರಾಸ್ ದುರಂತಕ್ಕೆ ಇಡೀ ದೇಶವೇ ಮಮ್ಮಲ ಮರಗುತ್ತಿದೆ. ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 116 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಸಾವು- ನೋವಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಜನರು ಸೇರಿದ್ದರಿಂದ ಗದ್ದಲ ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಅಬ್ಬಾ ಇಷ್ಟೊಂದು ಜನ ಅಲ್ಲಿ ಹೇಗೆ ಸೇರಿದ್ದರು? ಅಲ್ಲಿ ಯಾವ ಸತ್ಸಂಗ ಇತ್ತು? ರಾಜಕೀಯದವರು ಹಣ ಕೊಟ್ಟರೂ ಇಷ್ಟೊಂದು ಜನ ಸೇರಲ್ಲ. ಅಲ್ಲಿ ಸ್ವಯಂ ಆಗಿ ಜನ ಹೇಗೆ ಹೋಗಿತ್ತು? ಎಂಬೆಲ್ಲ ಚರ್ಚೆ ಈಗ ಶುರುವಾಗಿದೆ.
ಈ ಸತ್ಸಂಗ ಕಾರ್ಯಕ್ರಮದ ಕೇಂದ್ರಬಿಂದು ಆಗಿರುವ ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ. ಈ ವ್ಯಕ್ತಿ ಹಿಂದೆ ಗುಪ್ತಚರ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದರು. ಸರ್ಕಾರಿ ಸೇವೆಯಲ್ಲಿದ್ದಾಗ ಆಧ್ಯಾತ್ಮದತ್ತ ಒಲವು ಹೊಂದಿದ್ದ ಅವರು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಲು ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ ಸ್ವಯಂ ಘೋಷಿತ ಸಂತನಾಗಿದ್ದಾರೆ.
ನಾರಾಯಣ ಸಕರ್ ಹರಿ ಅಥವಾ ಸಕರ್ ವಿಶ್ವ ಹರಿ ಅಲಿಯಾಸ್ ಭೋಲೆ ಬಾಬಾ ಅವರಿಗೆ ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ, ದೆಹಲಿ ಸೇರಿದಂತೆ ದೇಶಾದ್ಯಂತ ಭೋಲೆ ಬಾಬಾಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ.
ಸ್ವಯಂ ಘೋಷಿತ ಸಂತ ನಾರಾಯಣ ಸಕರ್ ಹರಿ ಅಥವಾ ಸಾಕರ್ ವಿಶ್ವ ಹರಿ ಅಲಿಯಾಸ್ ಭೋಲೆ ಬಾಬಾ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಪಟಿಯಾಲಿ ತಹಸಿಲ್ನ ಬಹದ್ದೂರ್ ಗ್ರಾಮದಲ್ಲಿ ಜನಿಸಿದವರು. ಭೋಲೆ ಬಾಬಾ ತಮ್ಮ ಪ್ರವಚನಗಳಲ್ಲಿ, ತನ್ನನ್ನು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮಾಜಿ ಉದ್ಯೋಗಿ ಎಂದು ಬಣ್ಣಿಸಿಕೊಳ್ಳುತ್ತಿರುತ್ತಾರೆ.
ಅವರು ನಾರಾಯಣ ಸಕರ್ ವಿಶ್ವ ಹರಿ ಅಥವಾ ಭೋಲೆ ಬಾಬಾ ಆಗುವ ಮೊದಲು, ಸೂರಜ್ ಪಾಲ್ ಸಿಂಗ್ ಆಗಿದ್ದರು. ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸ್ಥಳೀಯ ಗುಪ್ತಚರ ಘಟಕದಲ್ಲಿ ಕಾನ್ಸ್ಟೆಬಲ್ ಆಗಿ 18 ವರ್ಷ ಕೆಲಸ ಮಾಡಿದ್ದರು. ಅವರ ಕೊನೆಯ ಪೋಸ್ಟಿಂಗ್ ಆಗ್ರಾದಲ್ಲಿ ಇತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ.
ಉದ್ಯೋಗ ತೊರೆದ ನಂತರ ಅಲಿಘರ್ ವಿಭಾಗದ ಕಾಸ್ಗಂಜ್ ಜಿಲ್ಲೆಯ ಹಳ್ಳಿಯೊಂದರಿಂದ ಬಂದ ಬಾಬಾ ಅವರಿಗೆ ಧರ್ಮೋಪದೇಶವನ್ನು ನೀಡಲು ಮತ್ತು ‘ಸತ್ಸಂಗ’ವನ್ನು ಆಯೋಜಿಸಲು ಪ್ರಾರಂಭಿಸಿದ್ದಾರೆ.
ಸಕರ್ ವಿಶ್ವ ಹರಿ ಬಾಬಾ’ ಎಂದು ಹೆಚ್ಚು ಜನಪ್ರಿಯವಾಗಿರುವ ಬಾಬಾ, ಸಾರ್ವಜನಿಕವಾಗಿ ಸದಾ ಬಿಳಿ ಉಡುಪುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಸತ್ಸಂಗ ನಡೆಸುವಾಗ ಪತ್ನಿ ಯಾವಾಗಲೂ ಅವರ ಪಕ್ಕದಲ್ಲಿಯೇ ಇರುತ್ತಾರೆ.
ಕಳೆದ 26 ವರ್ಷಗಳ ಹಿಂದೆ ಬಾಬಾ ಅವರು ತಮ್ಮ ಸರ್ಕಾರಿ ಕೆಲಸವನ್ನು ತೊರೆದು ಧಾರ್ಮಿಕ ಪ್ರವಚನ ನೀಡಲು ಆರಂಭಿಸಿದರು.. ‘ನರೇನ್ ಸಕಾರ ಹರಿ’ ಎಂದು ಸಂಬೋಧಿಸಲು ಇಷ್ಟಪಡುವ ಬಾಬಾ ಅವರ ಜನಪ್ರಿಯತೆ ಕಾಲಾನುಕ್ರಮದಲ್ಲಿ ಬೆಳೆಯುತ್ತ ಸಾಗಿತು.
ಭೋಲೇ ಬಾಬಾ ಅವರ ಅನುಯಾಯಿಗಳು ಹೆಚ್ಚಾಗಿ ಬ್ರಜ್ ಪ್ರದೇಶದ ಆಗ್ರಾ ಮತ್ತು ಅಲಿಗಢ ವಿಭಾಗಕ್ಕೆ ಸೇರಿದ ಕೆಳ ಆರ್ಥಿಕ ಸ್ತರದ ಜನರು. ಯಾವುದೇ ‘ಗುರು’ವಿನ ಅನುಯಾಯಿ ನಾನಲ್ಲ ಎಂದು ಹೇಳುವ ಭೋಲೇ ಬಾಬಾ, ದೇವರೇ ನನಗೆ ಬೋಧನೆ ಮಾಡಿರುವಂಥದ್ದು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೆ, ನಿನ್ನೆ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ನೂರಾರು ಜನರು ಪ್ರಾಣ ಬಿಟ್ಟಿದ್ದಾರೆ. ಹತ್ರಾಸ್ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ಸಂಘಟಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ನಂತರ ಸ್ವಯಂ ಘೋಷಿತ ದೇವರೇ ಈಗ ತಲೆ ಮರೆಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಮತ್ತು ನೆರೆಯ ರಾಜ್ಯಗಳ ಭಕ್ತರು ಸತ್ಸಂಗಕ್ಕೆ ಆಗಮಿಸಿದ್ದರು. ಭಕ್ತದಟ್ಟಣೆ ನಿರ್ವಹಿಸುವುದರಲ್ಲಿ ಎಡವಟ್ಟಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಭೋಲೆ ಬಾಬಾ ಅವರ ಅನುಯಾಯಿಗಳು ಭೋಲೆ ಭಾಬಾ ಅವರ ವಾಹನವು ಹಾದುಹೋಗುವ ಮಾರ್ಗದಿಂದ ಧೂಳು ಸಂಗ್ರಹಿಸಲು ಮುಗಿಬಿದ್ದಿದ್ದಾರೆ. ಆಗ ಕಾಲ್ತುಳಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸತ್ಸಂಗದಲ್ಲಿ ಭಕ್ತಿ ಪರಾಕಾಷ್ಠೆ ತಲುಪಿದಾಗ ಉಂಟಾದ ದುರದೃಷ್ಟಕರ ಪರಿಣಾಮ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಕಾರ್ಯಕ್ರಮ ಮುಗಿದ ನಂತರ ಭಕ್ತರು ಬಾಬಾನ ಪಾದ ಧೂಳು ಸಂಗ್ರಹಿಸಲು ಬಯಸಿದ್ದರು. ಹೀಗೆ ಭೋಲೆ ಬಾಬಾನ ದರ್ಶನ ಪಡೆದು ಪಾದ ಧೂಳಿ ಸಂಗ್ರಹಿಸಲು ಬಗ್ಗಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಸಿಕಂದರಾ ರಾವ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಕಾರ್ಯಕ್ರಮದಲ್ಲಿ ಟೆಂಟ್ನೊಳಗಿನ ಶಾಖ ಮತ್ತು ಉಸಿರುಗಟ್ಟುವಿಕೆ ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಎಂಬ ಅಂಶದ ಕಡೆಗೂ ಅಧಿಕಾರಿಗಳು ಗಮನಸೆಳೆದಿದ್ದಾರೆ. ಜನದಟ್ಟಣೆ ಮಿತಿ ಮೀರಿ ಉಂಟಾಗಿತ್ತು. 5,000 ಜನರ ಭಾಗವಹಿಸುವಿಕೆಗೆ ಅನುಮತಿ ಪಡೆದಿದ್ದರು. ಅಷ್ಟೇ ಜನರಿಗೆ ಆಗುವಂತೆ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಆದರೆ, ಸ್ಥಳದಲ್ಲಿ ಲಕ್ಷಾಂತರ ಜನರು ಇದ್ದರು ಎನ್ನಲಾಗಿದೆ. ಹತ್ರಾಸ್ ಕಾಲ್ತುಳಿತ ದುರಂತ ಸಂಭವಿಸಿದ ಬೆನ್ನಲ್ಲೆ ಭೋಲೆ ಬಾಬಾ ತಲೆಮರೆಸಿಕೊಂಡಿದ್ದಾನೆ. ಆತ ಎಲ್ಲಿ ಹೋದ ಎಂಬುದು ಯಾರಿಗೂ ಗೊತ್ತಿಲ್ಲ. ಉತ್ತರ ಪ್ರದೇಶ ಪೊಲೀಸರು ಮೈನ್ಪುರಿ ಜಿಲ್ಲೆಯಲ್ಲಿರುವ ಭೋಲೆ ಬಾಬಾನ ರಾಮ್ ಕುಟೀರ್ ಚಾರಿಟೆಬಲ್ ಟ್ರಸ್ಟ್ನ ಆಶ್ರಮದಲ್ಲಿ ಆತನಿಗಾಗಿ ಶೋಧ ನಡೆಸಿದ್ದಾರೆ. ಬಾಬಾ ತಲೆ ಮರೆಸಿಕೊಂಡ, ಭಕ್ತರು ಮಣ್ಣಾದರು…ಇದೇನಾ ಸತ್ಸಂಗ?