ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ದೆಹಲಿಗೆ ಎರಡು ಬಾರಿ ತಂಡ ಕಟ್ಟಿಕೊಂಡು ಹೋಗಿ ಬಂದಿರುವ ಯತ್ನಾಳ್ ಅವರು ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಇದರ ಬೆನ್ನಲ್ಲೇ, ಫೆಬ್ರವರಿ 20ರೊಳಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಬಿ.ವೈ.ವಿಜಯೇಂದ್ರ (BY Vijayendra) ಮಹತ್ವದ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆಯು ದೆಹಲಿಯಲ್ಲಿ ನಡೆಯುತ್ತಿದೆ. ಇದಾದ ಬಳಿಕವೇ ರಾಜ್ಯಾಧ್ಯಕ್ಷ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಫೆಬ್ರವರಿ 20ರೊಳಗೆ ರಾಜ್ಯಾಧ್ಯಕ್ಷ ವಿಚಾರ ಸ್ಪಷ್ಟವಾಗಲಿದೆ ಎಂದು ತುಮಕೂರು ಬಳಿ ನಡೆದ ಕಾರ್ಯಕ್ರಮವೊಂದಲ್ಲಿ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ನಾಯಕರು, ಕೇಂದ್ರದ ವರಿಷ್ಠರು ಯಾವಾಗ ಬೇಕಾದರೂ ರಾಜ್ಯಕ್ಕೆ ಆಗಮಿಸಬಹುದು. ರಾಜ್ಯದಲ್ಲಿರುವ ಎಲ್ಲ ಬಿಜೆಪಿ ಶಾಸಕರ ಜತೆ ಚರ್ಚಿಸಿದ ಬಳಿಕ ರಾಜ್ಯಾಧ್ಯಕ್ಷರ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು. ಬಿಜೆಪಿ ಆಂತರಿಕ ಬಂಡಾಯದ ಕುರಿತು ಮಾತನಾಡಿದ ಅವರು, ಪಕ್ಷದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದಷ್ಟೇ ಹೇಳಿದರು.
ಬಿಎಸ್ ವೈ ರಾಜಕೀಯ ಗುರು
ಬಿ.ಎಸ್.ಯಡಿಯೂರಪ್ಪ ಅವರೇ ನನ್ನ ರಾಜಕೀಯದ ಗುರು. ಅವರಿಂದ ನಾನು ರಾಜಕೀಯ ಕಲಿತವನು. ರಾಜಕೀಯದಲ್ಲಿ ನನಗೆ ಸ್ಪಷ್ಟ ಗುರಿ ಇದೆ. ಈಗಷ್ಟೇ ನಾನು ರಾಜಕೀಯ ಆರಂಭಿಸಿದ್ದೇನೆ. ಆರಂಭಿಕ ಹಂತದಲ್ಲಿ ಎಡವುವುದು ಸಹಜ. ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯದಲ್ಲಿ ಏನೇ ಸವಾಲುಗಳು ಎದುರಾದರೂ ಹೊರಗಡೆ ತೋರಿಸುತ್ತಿರಲಿಲ್ಲ. ನಾನು ಕೂಡ ಹಾಗೆಯೇ ಎಂದು ವಿಜಯೇಂದ್ರ ತಿಳಿಸಿದರು.