ಬೆಂಗಳೂರು: ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ನಗರದ ಶಿವಾನಂದ ಸರ್ಕಲ್ ಬಳಿಯ ತಮ್ಮ ಖಾಸಗಿ ನಿವಾಸದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಅಕ್ರಮದ ವಿರುದ್ಧ ಬಿಜೆಪಿ ರಸ್ತೆಗೆ ಇಳಿದು ಹೋರಾಟ ಮಾಡಿದೆ. ಇನ್ನೊಂದೆಡೆ ಇಡಿ ನಿನ್ನೆ ಬರೋಬ್ಬರಿ 300 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ್ದಾರೆ. ಈ ಮೂಲಕ ಮುಡಾದಲ್ಲಿ ಅಕ್ರಮ ಆಗಿರುವುದು ಸಾಬೀತಾಗಿದೆ. ಇದಕ್ಕಾಗಿ ಸ್ನೇಹಮಯಿ ಕೃಷ್ಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ದನಿಯನ್ನು ಈ ಸರ್ಕಾರ ಹತ್ತಿಕ್ಕುವ ಕೆಲಸ ಮಾಡಿ, ಸಾಕಷ್ಟು ಆರೋಪಗಳನ್ನು ಮಾಡಿತ್ತು.
ಈಗ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯ ಸಿದ್ಧರಾಮಯ್ಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಾಗ ಅವರ ವಿರುದ್ಧವೂ ಸರ್ಕಾರ ಹೇಳಿಕೆ ಕೊಟ್ಟು, ರಾಜ್ಯಪಾಲರು ಮಾಡಿದ್ದು ತಪ್ಪು ಎಂದಿತ್ತು. ಕೋರ್ಟ್ ಈಗ ರಾಜ್ಯಪಾಲರ ನಡೆ ಸರಿಯಾಗಿದೆ ಎಂದಿದೆ. ನಮಗೆ ಸಿದ್ಧರಾಮಯ್ಯರ ಮೇಲೆ ವಿರೋಧವಿಲ್ಲ.ತಪ್ಪಾದಾಗ ರಾಜೀನಾಮೆ ನೀಡಬೇಕು. ಈಗಲೂ ಕಾಲ ಮಿಂಚಿಲ್ಲ.
ತಕ್ಷಣವೇ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈಸೂರಿಗೆ ಪಾದಯಾತ್ರೆ ಮಾಡಿದ್ದು ನಿಮಗೆ ಗೊತ್ತಿದೆ. ಈ ಮುಡಾ ಅಕ್ರಮವನ್ನು ಸಿಬಿಐಗೆ ವಹಿಸಬೇಕು. ಕೂಡಲೇ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.