ಬೆಂಗಳೂರು: ಷೇರುಪೇಟೆಯ ಹೆಸರಲ್ಲಿ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದ ಜಾಲವನ್ನು ಕೇಂದ್ರ ಅಪರಾಧ ದಳದ ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಆಕ್ಸಿಸ್ ಬ್ಯಾಂಕಿನ ನಾಲ್ವರು ಉದ್ಯೋಗಿಗಳು ಸೇರಿದಂತೆ ಒಟ್ಟು ಎಂಟು ಮಂದಿ ವಂಚಕರು ಬಂಧಿಗಳಾಗಿದ್ದಾರೆ.
ಯಲಹಂಕದ ವ್ಯೆಕ್ತಿಯೊಬ್ಬರಿಗೆ ವಿಐಪಿ ಟ್ರೇಡಿಂಗ್ ಹೆಸರಲ್ಲಿ ವಂಚನೆ ಮಾಡಿದ್ದು, ಮೊದಲಿಗೆ ಹೂಡಿಕೆ ನೆಪದಲ್ಲಿ ಐವತ್ತು ಸಾವಿರ ರೂಪಾಯಿಂದ ಶುರು ಮಾಡಿಸಿ ನಂತರದಲ್ಲಿ ಲಕ್ಷ-ಲಕ್ಷ ಪೀಕುವುದರೊಂದಿಗೆ ₹1.5 ಕೋಟಿ ಹಣ ಆರೋಪಿಗಳಿಗೆ ಸಂದಾಯವಾಗಿದೆ. ಮೊದಲು ಹೂಡಿಕೆ ಮಾಡಿದ ಹಣ 28 ಕೋಟಿ ರೂಪಾಯಿ ಅಕೌಂಟಿಗೆ ಬಂದಂತೆ ವಾಟ್ಸಾಪ್ ಮೂಲಕ ತೋರಿಸಿ, ಮೊದಲಿಗೆ ಟ್ಯಾಕ್ಸ್ ರೂಪದ 75ಲಕ್ಷ ರೂಪಾಯಿಯನ್ನು ಕಟ್ಟುವಂತೆ ಪ್ರಚೋದಿಸಿದ್ದರು. ಅನುಮಾನಗೊಂಡ ಹಣ ಹೂಡಿದ ವ್ಯೆಕ್ತಿ ಸಿಸಿಬಿಗೆ ದೂರು ನೀಡಿದ್ದಾರೆ. ಮಾಹಿತಿಯ ಜಾಡು ಹಿಡಿದ ಪೊಲೀಸರು ಆರೋಪಿಗಳ ಪೈಕಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಆಕ್ಸಿಸ್ ಬ್ಯಾಂಕ್ ನಾಗರಭಾವಿ ಶಾಖೆಯ ವ್ಯವಸ್ಥಾಪಕ ಕಿಶೋರ್ ಸಾಹು, ಮಾರಾಟ ವಿಭಾಗದ ವ್ಯವಸ್ಥಾಪಕ ಮನೋಹರ್, ಮಾರಾಟ ವಿಭಾಗದ ಪ್ರತಿನಿಧಿಗಳಾದ ಕಾರ್ತಿಕ್, ರಾಕೇಶ್ ಜೊತೆ ಮಾಲಾ, ಕೆಂಗೇಗೌಡ, ಲಕ್ಷ್ಮೀಕಾಂತ್, ರಘರಾಜ್ ಬಂಧಿತ ಆರೋಪಿಗಳು.
ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಇನ್ನುಳಿದ ಒಂಬತ್ತು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ.