ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಮೈಕ್ರೋ ಫೈನಾನ್ಸ್ (micro finance) ವಿಚಾರವಾಗಿ, ಈಗಾಗಲೇ ಸರ್ಕಾರ ಸುಗ್ರೀವಾಜ್ಞೆ(Ordinance) ಜಾರಿಗೆ ನಿರ್ಧರಿಸಿದ್ದು ಹೊಸ ಕಾನೂನು ತರಲು ಮುಂದಾಗಿದೆ. ಇತ್ತ ಕ್ಯಾಬಿನೆಟ್ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿಚಾರಕ್ಕೆ ಕಾನೂನು ಜಾರಿ ಮಾಡುವ ಬಗ್ಗೆ ಚರ್ಚೆಗಳನ್ನು ನಡೆಸಿದ್ದು, ಸುಗ್ರೀವಾಜ್ಞೆಯ ಅಂಶಗಳು ಸಿದ್ಧವಾಗಿದೆ.
ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬೇಕಾಗಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾನೂನು ಮತ್ತು ಸಂಸದೀಯ ಇಲಾಖೆ ರಾಜ್ಯಪಾಲರಿಗೆ ಕಡತವನ್ನು ಕಳುಹಿಸಿಕೊಟ್ಟಿದೆ.
ಇನ್ನು ಕಡತವನ್ನು ಪರಿಶೀಲಿಸುತ್ತಿರುವ ರಾಜ್ಯಪಾಲರು, ಇಂದು ಅಥವಾ ನಾಳೆಯೋ ಕಡತಕ್ಕೆ ಸಹಿ ಮಾಡಲಿದ್ದು, ರಾಜ್ಯಪಾಲರು ಕಾನೂನು ಪರಿಣಿತರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ಕೊಟ್ಟ ಪರಮೇಶ್ವರ್, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕುವುದು ನಮ್ಮ ಸರ್ಕಾರದ ಧ್ಯೇಯ ಎಂದಿದ್ದಾರೆ.