ಬೆಂಗಳೂರು: ವ್ಯಕ್ತಿಯೊಬ್ಬರು ಮಹಿಳಾ ಕೂಲಿ ಕಾರ್ಮಿಕರಿಗೆ ವಿಮಾನಯಾನ ಮಾಡಿಸಿದ್ದಾರೆ. ವಿಜಯನಗರ ಜಿಲ್ಲೆಯ ರೈತರೊಬ್ಬರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ಭಾಗ್ಯ ಕರುಣಿಸಿದ್ದಾರೆ.
ರೈತನ ಕಾರ್ಯಕ್ಕೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ರೈತ ವಿಶ್ವನಾಥ್, ತಮ್ಮ ಜಮೀನಿಗೆ ಖಾಯಂ ಆಗಿ ಕೂಲಿ ಕೆಲಸಕ್ಕೆ ಬರುತ್ತಿದ್ದ ಮಹಿಳಾ ಕಾರ್ಮಿಕರಿಗೆ ಈ ಭಾಗ್ಯ ಕರುಣಿಸಿದ್ದಾರೆ. ಈ ಮೂಲಕ ಅವರು ಜೀವನ ಪರ್ಯ೦ತ ನೆನಪಿನಲ್ಲಿಡುವಂತೆ ಮಾಡಿದ್ದಾರೆ.
ವಿಶ್ವನಾಥ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾರ್ಮಿಕರು ವಿಮಾನ ಹಾರುವುದನ್ನು ನೋಡಿ ಖುಷಿ ಪಡುತ್ತಿದ್ದರು. ಇದನ್ನು ಗಮನಿಸಿ ವಿಶ್ವನಾಥ್, ವಿಮಾನದಲ್ಲಿ ಪ್ರಯಾಣ ಮಾಡಿಸಿ ಅವರ ಆಸೆ ಈಡೇರಿಸಬೇಕೆಂದು ಎಂದು ತೀರ್ಮಾನಿಸಿ ಆ ಕನಸು ಈಡೇರಿಸಿದ್ದಾರೆ.
10 ಮಹಿಳಾ ಕಾರ್ಮಿಕರಿಗೆ ಹಾಗೂ ತಮ್ಮನ್ನು ಸೇರಿದಂತೆ 11 ಜನರಿಗೆ ವಿಮಾನದಲ್ಲಿ ಗೋವಾಗೆ ಹೋಗಲು ಟಿಕೆಟ್ ಬುಕಿಂಗ್ ಮಾಡಿದ್ದಾರೆ. ನಂತರ, ಎಲ್ಲ ಕಾರ್ಮಿಕರನ್ನು ಕರೆದುಕೊಂಡು ಶಿವಮೊಗ್ಗಕ್ಕೆ ತೆರಳಿದ್ದಾರೆ.
ಎಲ್ಲ ಮಹಿಳೆಯರೂ ಒಂದೇ ತರಹದ ಸೀರೆ ಧರಿಸಿಕೊಂಡು ಶಿವಮೊಗ್ಗದಿಂದ ಗೋವಾಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ.