ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಪಾಲುದಾರರೊಂದಿಗೆ ಸಮಾಲೋಚನೆ ನಡೆಸದೆ ಆಟೋರಿಕ್ಷಾ ಮೀಟರ್ ದರಗಳನ್ನು ಪರಿಷ್ಕರಿಸುವ ಏಕಪಕ್ಷೀಯ ನಿರ್ಧಾರವನ್ನು ಆಟೋ ರಿಕ್ಷಾ ಚಾಲಕರ ಒಕ್ಕೂಟ ವಿರೋಧಿಸಿದೆ.
ಸೋಮವಾರ ಹೊರಡಿಸಲಾದ ದರ ಪರಿಷ್ಕರಣಾ ಆದೇಶವನ್ನು ಒಕ್ಕೂಟ “ಅವೈಜ್ಞಾನಿಕ” ಎಂದು ಟೀಕಿಸಿದೆ. 2023ರಿಂದ ದರ ಪರಿಷ್ಕರಣೆಗೆ ಒತ್ತಾಯಿಸಲಾಗುತ್ತಿದೆ ಎಂದು ARDU ಹೇಳಿದೆ. ಹಿಂದಿನ ಜಿಲ್ಲಾಧಿಕಾರಿಗಳು ಆಟೋರಿಕ್ಷಾ ಸಂಸ್ಥೆಗಳೊಂದಿಗೆ ಸಭೆಗಳನ್ನು ನಡೆಸಿದ್ದರು. ಆದರೆ ಈಗ ಯಾವುದೇ ಮಾತುಕತೆ ಹಾಗೂ ಚರ್ಚೆ ನಡೆಸದೆ ದರ ಏರಿಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕ ಮೋಟಾರು ವಾಹನ ನಿಯಮಗಳು 53 ಅನ್ನು ಉಲ್ಲೇಖಿಸಿರುವ ಒಕ್ಕೂಟ, “ಡಿಸಿಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಲ್ಲ, ಆದ್ದರಿಂದ ಅವರು ದರ ಏರಿಕೆ ಬಗ್ಗೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅದು ಒತ್ತಿ ಹೇಳಿದೆ. ಬೆಂಗಳೂರಿನೊಳಗೆ ಆಟೋ ಪರ್ಮಿಟ್‌ಗಳನ್ನು ನೀಡುವ ಅಥವಾ ರದ್ದುಗೊಳಿಸುವ ಅಧಿಕಾರ ಡಿಸಿಗಳಿಗೆ ಇಲ್ಲ ಎಂದು ತಿಳಿಸಿದೆ.



















