ಬೆಂಗಳೂರು : ಮ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಈಗ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ನಗರಗಳಲ್ಲಿ ಭಾರೀ ಪರಿಣಾಮ ತಟ್ಟಿದೆ. ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉಂಟಾದ ಅಸ್ಥಿರತೆಯಿಂದ ಗ್ಯಾಸ್ ಪೂರೈಕೆ ಅಸ್ತವ್ಯಸ್ತಗೊಂಡಿದ್ದು, ಆಟೋ ಗ್ಯಾಸ್ ಭಾರೀ ಕೊರತೆ ಕಾಣಿಸಿಕೊಂಡಿದೆ.
ನಗರದ ಅನೇಕ ಗ್ಯಾಸ್ ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಆಟೋಗಳ ಸಾಲು ಕಾಣಿಸುತ್ತಿದೆ. ಹಲವೆಡೆ “No Stock” ಫಲಕ ಹಾಕಲಾಗಿದ್ದು, ಕೆಲವು ಬಂಕ್‌ಗಳು ಸಂಪೂರ್ಣ ಬಂದ್ ಆಗಿವೆ. ಗ್ಯಾಸ್ ಸಿಗುವ ನಿರೀಕ್ಷೆಯಲ್ಲಿ ಚಾಲಕರು 4–5 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿರುವ ಗ್ಯಾಸ್‌ಗೂ ಮಿತಿ ವಿಧಿಸಲಾಗಿದ್ದು, ಪ್ರತಿ ಆಟೋಗೆ ಸುಮಾರು ₹400 ಮೌಲ್ಯದಷ್ಟೇ ನೀಡಲಾಗುತ್ತಿದೆ. ಇದರಿಂದ ಕೆಲವರು ತಮ್ಮ ಆಟೋಗಳನ್ನು ಬಂಕ್‌ಗಳಲ್ಲೇ ಬಿಟ್ಟು ಹೋಗುವ ಪರಿಸ್ಥಿತಿ ಕೂಡ ಉಂಟಾಗಿದೆ.
ಈ ಸಂಕಷ್ಟವು ಆಟೋ ಚಾಲಕರ ಜೀವನೋಪಾಯದ ಮೇಲೆ ದೊಡ್ಡ ಹೊಡೆತ ನೀಡಿದೆ. ದಿನಸಿ ಆದಾಯ ಕಡಿಮೆಯಾಗಿದ್ದು, ಜೀವನ ನಿರ್ವಹಣೆಯೇ ಕಷ್ಟವಾಗುತ್ತಿದೆ. ಇದರ ಪರಿಣಾಮವಾಗಿ ನಗರದಲ್ಲಿ ಆಟೋ ಪ್ರಯಾಣ ದರವು ಸುಮಾರು 10%ರವರೆಗೆ ಹೆಚ್ಚಳ ಕಂಡಿದೆ. ಹೆಚ್ಚುವರಿ ದರಕ್ಕಾಗಿ ಚಾಲಕರು ಪ್ರಯಾಣಿಕರನ್ನು ಮನವಿ ಮಾಡಿಕೊಳ್ಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಈ ಸಮಸ್ಯೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ; ತುಮಕೂರು, ಮೈಸೂರು, ರಾಮನಗರ ಹಾಗೂ ರಾಯಚೂರು ಜಿಲ್ಲೆಗಳಲ್ಲಿಯೂ ಗಂಭೀರವಾಗಿ ಕಾಣಿಸಿಕೊಂಡಿದೆ. ಪರಿಸ್ಥಿತಿ ಮುಂದುವರಿದರೆ ಕೆಲ ಆಟೋ ಚಾಲಕರು ಬೇರೆ ಉದ್ಯೋಗಗಳತ್ತ ಮುಖ ಮಾಡುವ ಸಾಧ್ಯತೆಯೂ ಇದೆ.
ಒಟ್ಟಿನಲ್ಲಿ, ಜಾಗತಿಕ ಮಟ್ಟದ ಯುದ್ಧದ ಪರಿಣಾಮ ಸ್ಥಳೀಯ ಸಾರಿಗೆ ವ್ಯವಸ್ಥೆಯವರೆಗೂ ತಲುಪಿದ್ದು, ಸಾಮಾನ್ಯ ಜನರ ದೈನಂದಿನ ಬದುಕನ್ನೇ ಅಸ್ತವ್ಯಸ್ತಗೊಳಿಸುತ್ತಿದೆ.
ಇದನ್ನೂ ಓದಿ : ಎಲ್‌ಪಿಜಿ ಬೆನ್ನಲ್ಲೇ ಡಾಂಬರಿಗೂ ಕಂಟಕ : ರಸ್ತೆ ಕಾಮಗಾರಿಗಳು ಸ್ಥಗಿತ



















