ಬೆಂಗಳೂರು: ಓಲಾ ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿಯನ್ನು ನಿಂದಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಆಟೋ ಚಾಲಕನಿಗೆ ಸಂಕಷ್ಟ ಶುರುವಾಗಿದೆ.
ಯುವತಿ ದೂರು ನೀಡಿದ್ದರಿಂದಾಗಿ ಆರೋಪಿ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಜಾಮೀನಿಗೆ ಹಣ ಹೊಂದಿಸಲು ಕೂಡ ಆಟೋ ಚಾಲಕ ಪರದಾಡುವಂತಾಗಿದೆ. ಮುತ್ತುರಾಜ್ ಎಂಬ ಆಟೋ ಚಾಲಕ, ಓಲಾ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದಕ್ಕೆ ಅವಾಚ್ಯ ಶಬ್ದದಿಂದ ನಿಂದಿಸಿ ಯುವತಿಯ ಕಪ್ಪಾಳಕೆ ಹೊಡೆದಿದ್ದ. ಈ ಘಟನೆ ಬೆಂಗಳೂರಿನ ರಾಜಕುಮಾರ್ ರಸ್ತೆಯಲ್ಲಿ ನಡೆದಿತ್ತು.
ಚಾಲಕ, ಯುವತಿಗೆ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಯ ನಂತರ ಪೊಲೀಸರು ಯುವತಿಯಿಂದ ದೂರು ಸ್ವೀಕರಿಸಿದ್ದರು. ದೂರು ದಾಖಲಾದ ಬೆನ್ನಲ್ಲಿಯೇ ಮಾಗಡಿ ರಸ್ತೆ ಸಂಚಾರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಆಟೋ ಚಾಲಕ ಮುತ್ತುರಾಜ್ ಒಂದು ರೈಡ್ ಗಾಗಿ ಜಗಳ ಮಾಡಿ ಈಗ ಫಜೀತಿಗೆ ಸಿಲುಕಿದ್ದಾನೆ. ಆದರೆ, ಈತನ ದುರಹಂಕಾರಕ್ಕೆ ಜನರು ಕೂಡ ಹಿಡಿಶಾಪ ಹಾಕಿದ್ದಾರೆ. ಬೆಂಗಳೂರಿನಲ್ಲಿ ಹಲವಾರು ಆಟೋ ಚಾಲಕರು ಕೂಡ ಇದೇ ರೀತಿ ಮಾಡುತ್ತಾರೆಂಬ ಆರೋಪ ಕೂಡ ಕೇಳಿ ಬಂದಿತ್ತು. ಈ ಪ್ರಕರಣವನ್ನು ಸದ್ಯ ಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದೆ.
ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೆ 20 ರಿಂದ 30 ರೂ. ಮಾತ್ರ ಚಾಲಕನಿಗೆ ನಷ್ಟವಾಗುತ್ತಿತ್ತು. ಲಾಯರ್ ಖರ್ಚು ಸೇರಿ ಜಾಮೀನಿನ ಪ್ರಕ್ರಿಯೆಗೆ ಅಂದಾಜು 30 ಸಾವಿರ ಹೊಂದಿಸಬೇಕಾಗಿದೆ. ಆದರೆ ಈಗ 30 ಸಾವಿರ ರೂ. ಹೊಂದಿಸಲು ಸಾಧ್ಯವಾಗದೆ ಆಟೋ ಚಾಲಕ ಒದ್ದಾಡುವಂತಾಗಿದೆ. ಇದು ಬೇಕಿತ್ತಾ ನಿನಗೆ ಎಂದು ಸಾರ್ವಜನಿಕರು ಈಗ ಪ್ರಶ್ನಿಸುತ್ತಿದ್ದಾರೆ.