ಬೆಂಗಳೂರು: ಇತ್ತೀಚೆಗೆ ಎಲ್ಲೆಡೆ ಕಾಮುಕರ ಅಟ್ಟಹಾಸ ಹೆಚ್ಚಾಗುತ್ತಿದೆ. ಆಟೋ ಚಾಲಕನೊಬ್ಬ, ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಖಾಸಗಿ ಅಂಗ ತೋರಿಸಿರುವ ಘಟನೆಯೊಂದು ನಡೆದಿದೆ.
ರಾಜಾಜಿನಗರದಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುವ ಯುವತಿಯೊಬ್ಬಳಿಗೆ ಆಟೋ ಚಾಲಕ ತನ್ನ ಪ್ಯಾಂಟ್ ಬಿಚ್ಚಿ ಖಾಸಗಿ ಭಾಗ ತೋರಿಸಿದ್ದಾನೆ ಎನ್ನಲಾಗಿದೆ. ಹಾಡುಹಗಲೇ ರಡೆರೆಡು ಬಾರಿ ಪ್ಯಾಂಟ್ ಬಿಚ್ಚಿ ಅಂಗಾಂಗ ತೋರಿಸಿದ್ದಾನೆ ಎನ್ನಲಾಗಿದೆ.
ಯುವತಿಯು ಮಧ್ಯಾಹ್ನ ಊಟಕ್ಕೆಂದು ಬ್ಯೂಟಿ ಪಾರ್ಲರ್ ನಿಂದ ಅನತಿ ದೂರದಲ್ಲಿದ್ದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈಸ್ಟ್ ವೆಸ್ಟ್ ಕಾಲೇಜು ಹತ್ತಿರ ಯುವತಿಯನ್ನೇ ಬೆನ್ನಟ್ಟಿ ಬಂದ ಆಟೋ ಚಾಲಕ ಯಾರೂ ಇಲ್ಲದ ಸಮಯ ನೋಡಿ ಪ್ಯಾಂಟ್ ಜಿಪ್ ಬಿಚ್ಚಿ ಖಾಸಗಿ ಅಂಗ ಪ್ರದರ್ಶಿಸಿದ್ದಾನೆ. ಕೂಡಲೇ ಯುವತಿ ಬೆಚ್ಚಿ ಬಿದ್ದಿದ್ದಾರೆ. ಭಯದಿಂದಾಗಿ ಯುವತಿ ತನ್ನ ಕಾಲಲ್ಲಿದ್ದ ಚಪ್ಪಲಿ ಕಿತ್ತು ಎಸೆದಿದ್ದಾಳೆ. ಆನಂತರ ಅಲ್ಲಿಂದ ಚಾಲಕ ಪರಾರಿಯಾಗಿದ್ದಾನೆ.
ಸ್ವಲ್ಪ ಹೊತ್ತಿನಲ್ಲೇ ಸೈಕೋಪಾತ್ ಆಟೋ ಚಾಲಕ, ಮತ್ತೆ ಯುವತಿ ಮುಂದೆ ಬಂದು ಮತ್ತೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದಾನೆ. ಇದನ್ನ ಕಂಡ ಯುವತಿ ಕೂಗಿದ್ದಾರೆ. ಸ್ಥಳೀಯರು ಬರುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಈ ಕುರಿತು ಯುವತಿ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.