ಬೆಂಗಳೂರು: ಕೆಂಗೇರಿಯಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಅಪಘಾತಕ್ಕೊಳಗಾಗಿ ಮೃತಪಟ್ಟ ಮಹಿಳೆಯ ಶವವನ್ನು ಆಟೋ ಚಾಲಕನೊಬ್ಬ ಕಸದ ರಾಶಿಗೆ ಎಸೆದು ಪರಾರಿಯಾಗಿರುವ ಅಮಾನವೀಯ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಗೇರಿ ಉಪನಗರದ ನಿವಾಸಿ ಕೆಂಪಮ್ಮ (50) ಮೃತಪಟ್ಟ ಮಹಿಳೆ. ಭಾನುವಾರ ರಾತ್ರಿ ಕೆಂಪಮ್ಮ ಅವರು ರಸ್ತೆ ದಾಟುತ್ತಿದ್ದಾಗ ಆಟೋ ಡಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಆಕೆಯನ್ನು ಮಾನವೀಯತೆ ದೃಷ್ಟಿಯಿಂದ ಆಟೋ ಚಾಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೆಂಪಮ್ಮ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಮಹಿಳೆ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಗಾಬರಿಗೊಂಡ ಆಟೋ ಚಾಲಕ, ಪೊಲೀಸರಿಗೆ ತಿಳಿಸುವ ಬದಲು ಶವವನ್ನು ತನ್ನ ಆಟೋದಲ್ಲಿ ತುಂಬಿಕೊಂಡು ಹೋಗಿ, ಮೈಲಸಂದ್ರದ ಬಳಿಯ ರಸ್ತೆ ಬದಿಯ ಕಸದ ರಾಶಿಗೆ ಎಸೆದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಮೊದಲು ಇದೊಂದು ಕೊಲೆ ಎಂದು ಶಂಕಿಸಲಾಗಿತ್ತು. ಆದರೆ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಟೋ ಅಪಘಾತ ಮತ್ತು ನಂತರ ಶವವನ್ನು ಎಸೆದ ವಿಷಯ ಬೆಳಕಿಗೆ ಬಂದಿದೆ. ಈ ಘಟನಾ ಸಂಬಂಧ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ತಲೆಮರೆಸಿಕೊಂಡಿರುವ ಆಟೋ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಗಾಂಜಾ ಅಮಲಿನಲ್ಲಿ ಗೆಳೆಯನನ್ನೇ ಕೊಲೆಗೈದ ಕೇಸ್ : ಐವರನ್ನು ಹೆಡೆಮುರಿ ಕಟ್ಟಿದ ಪೊಲೀಸರು!


















