T20 World Cup 2024ರ ಸೂಪರ್ 8ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭಾರೀ ಮುಖಭಂಗವಾಗಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಅಪ್ಘಾನಿಸ್ತಾನ್ ತಂಡ 21 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ್ ತಂಡಕ್ಕೆ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಉತ್ತಮ ಆರಂಭ ಒದಗಿಸಿದರು.
ಈ ಜೋಡಿ ಮೊದಲ ವಿಕೆಟ್ ಗೆ 118 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿತು. ಈ ಮಧ್ಯೆ 49 ಎಸೆತಗಳಲ್ಲಿ 60 ರನ್ ಗಳಿಸಿದ್ದ ರಹಮಾನುಲ್ಲಾ ಗುರ್ಬಾಝ್ ಔಟಾದರೆ, 51 ರನ್ ಗಳಿಸಿದ್ದ ಇಬ್ರಾಹಿಂ ಝದ್ರಾನ್ ಕೂಡ ವಿಕೆಟ್ ಒಪ್ಪಿಸಿದರು. ಆರಂಭಿಕರು ಔಟ್ ಆಗುತ್ತಿದ್ದಂತೆ ಆಸ್ಟ್ರೇಲಿಯಾ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಫ್ಘಾನಿಸ್ತಾನ್ ತಂಡದ ರನ್ ಗತಿಯನ್ನು ನಿಯಂತ್ರಿಸಿದರು. ಈ ವೇಳೆ ಅಪ್ಘಾನ್ ತಂಡದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಅಫ್ಘಾನಿಸ್ತಾನ್ 148 ರನ್ ಗಳಿಸಿತು.
ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ನವೀನ್ ಉಲ್ ಹಕ್ ಮೊದಲ ಓವರ್ ನಲ್ಲಿಯೇ ಆಘಾತ ನೀಡಿದರು. ಟ್ರಾವಿಸ್ ಹೆಡ್ (0) ಬೌಲ್ಡ್ ಆದರು. ಮಿಚೆಲ್ ಮಾರ್ಷ್ (12) ಕೂಡ ವಿಕೆಟ್ ಒಪ್ಪಿಸಿದರು. ಡೇವಿಡ್ ವಾರ್ನರ್ (3) ವಿಕೆಟ್ ಪಡೆಯುವಲ್ಲಿ ಮೊಹಮ್ಮದ್ ನಬಿ ಯಶಸ್ವಿಯಾದರು.
ಇನ್ನೊಂದೆಡೆ ಗ್ಲೆನ್ ಮ್ಯಾಕ್ಸ್ ವೆಲ್ ಉತ್ತಮ ಪ್ರದರ್ಶನ ತೋರಿದರು. 41 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 6 ಬೌಂಡರಿಗಳೊಂದಿಗೆ 59 ರನ್ ಗಳಿಸಿ ಔಟ್ ಆದರು. ಉಳಿದಂತೆ ಮಾರ್ಕಸ್ ಸ್ಟೋಯಿನಿಸ್ (11), ಟಿಮ್ ಡೇವಿಡ್ (2), ಮ್ಯಾಥ್ಯೂ ವೇಡ್ (5) ಬಂದ ವೇಗದಲ್ಲಿಯೇ ಔಟ್ ಆದರು. ಪ್ಯಾಟ್ ಕಮಿನ್ಸ್ (3) ಕ್ಲೀನ್ ಬೌಲ್ಡ್ ಆದರು. ಪರಿಣಾಮ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ 2 ಓವರ್ ಗಳಲ್ಲಿ ಗೆಲ್ಲಲು 33 ರನ್ ಗಳ ಅವಶ್ಯಕತೆ ಇತ್ತು. ನಂತರ ಕೊನೆಯ ಓವರ್ ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 24 ರನ್ ಗಳ ಬೇಕಾಯಿತು. ಆದರೆ, ಅಂತಿಮ ಓವರ್ ನ 2 ಎಸೆತದಲ್ಲಿ ಆ್ಯಡಂ ಝಂಪಾ ಕ್ಯಾಚ್ ನೀಡುವ ಮೂಲಕ ಆಸ್ಟ್ರೇಲಿಯಾ ಕೇವಲ 127 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಅಫ್ಘಾನಿಸ್ತಾನ್ ತಂಡ 21 ರನ್ ಗಳ ಐತಿಹಾಸಿಕ ಗೆಲುವು ಕಂಡಿತು. ಅಫ್ಘಾನಿಸ್ತಾನ್ ಪರ ಗುಲ್ಬದ್ದಿನ್ ನೈಬ್ 4, ನವೀನ್ ಉಲ್ ಹಕ್ 3 ವಿಕೆಟ್ ಪಡೆದು ಮಿಂಚಿದರು.