ತುಮಕೂರು): ಅನೈತಿಕ ಸಂಬಂಧ ಮನೆಯಲ್ಲಿ ಗೊತ್ತಾಗಿದ್ದರಿಂದಾಗಿ ವಿವಾಹಿತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಚಳ್ಳಕೆರೆ ರಸ್ತೆಯ ಜಮೀನೊಂದರಲ್ಲಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋವಿಂದರೆಡ್ಡಿ(40), ಭಾಗ್ಯ(38) ಆತ್ಮಹತ್ಯೆ ಮಾಡಿಕೊಂಡವರು. ಅನೈತಿಕ ಸಂಬಂಧ ಕುಟುಂಬಸ್ಥರಿಗೆ ಗೊತ್ತಾಗಿದ್ದರಿಂದ ಮದ್ಯದಲ್ಲಿ ವಿಷ ಸೇರಿಸಿ ಸೇವಿಸಿದ್ದಾರೆ ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಆಂಧ್ರ ಪ್ರದೇಶ ಮೂಲದ ಗೋವಿಂದರೆಡ್ಡಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಮಾಡಿಕೊಂಡಿದ್ದ. ತಮಿಳುನಾಡು ಮೂಲದ ಭಾಗ್ಯಳಿಗೂ ಸಹ ಬೇರೆಯವರೊಂದಿಗೆ ಮದುವೆಯಾಗಿತ್ತು. ಆದರೂ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ ಅನೈತಿಕ ಸಂಬಂಧ ಅಂಟಿಕೊಂಡಿತ್ತು ಎನ್ನಲಾಗಿದೆ. ಸದ್ಯ ಈ ವಿಷಯ ಮನೆಯಲ್ಲಿ ಗೊತ್ತಾಗಿದ್ದರಿಂದಾಗಿ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.