ಬೆಂಗಳೂರು: ಭಾರತ ಸೇರಿ ಜಗತ್ತಿನಾದ್ಯಂತ ಐಟಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಕೆಲ ದಿನಗಳ ಹಿಂದಷ್ಟೇ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಯು 12 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ. ಇದರ ಬೆನ್ನಲ್ಲೇ, ಇಂಟೆಲ್ ಕಂಪನಿಯೂ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದೆ. ಇದರ ಮಧ್ಯೆಯೇ, ಇನ್ಫೋಸಿಸ್ ಕಂಪನಿಯು ಉದ್ಯೋಗಾಸಕ್ತರಿಗೆ ಸಿಹಿ ಸುದ್ದಿ ನೀಡಿದೆ.
ಹೌದು, ಮುಂದಿನ ದಿನಗಳಲ್ಲಿ 20 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಇನ್ಫೋಸಿಸ್ ಕಂಪನಿಯು ತಿಳಿಸಿದೆ. ಅದರಲ್ಲೂ ಫ್ರೆಶರ್ ಗಳನ್ನು ನೇಮಕಾತಿ ಮಾಡಿಕೊಳ್ಳಲು ಕಂಪನಿ ಆಸಕ್ತಿ ತೋರಿದೆ. ಇದರಿಂದಾಗಿ, ಈಗಷ್ಟೇ ಪದವಿ ಮುಗಿಸಿದವರಿಗೆ ಅನುಕೂಲವಾಗಲಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 17,000ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದೇವೆ ಎಂದು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ತಿಳಿಸಿದ್ದಾರೆ. ಹಾಗೆಯೇ, ಈ ವರ್ಷ ಸುಮಾರು 20,000 ಕಾಲೇಜು ಪದವೀಧರರನ್ನು ಕಂಪನಿಗೆ ನೇಮಿಸಿಕೊಳ್ಳುವ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಮರುಕೌಶಲದಲ್ಲಿ ಕಾರ್ಯತಂತ್ರವಾಗಿ ಹೂಡಿಕೆ ಮಾಡಲಾಗುತ್ತಿದ್ದು, ಕಂಪನಿಗೆ ಮುಂಚೂಣಿಗೆ ಬರಲು ಸಹಾಯ ಮಾಡಿದೆ. ವಿವಿಧ ಹಂತಗಳಲ್ಲಿ ಕಂಪನಿಯ ಸುಮಾರು 2,75,000 ಉದ್ಯೋಗಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಭವಿಷ್ಯದಲ್ಲಿ ಎಐ ಪರಿಣಾಮದ ಬಗ್ಗೆ ಮಾತನಾಡಿರುವ ಅವರು, ಎಐ ಆಧಾರಿತ ಆಟೋಮೆಷನ್ ನಿಂದ ಸಾಫ್ಟ್ ವೇರ್ ಅಭಿವೃದ್ಧಿ ವಿಷಯದಲ್ಲಿ ಶೇ.5ರಿಂದ 15ರಷ್ಟು ಉತ್ಪಾದಕತೆ ಹೆಚ್ಚಾಗಲಿದೆ. ನಿಪುಣರ ಮೇಲ್ವಿಚಾರಣೆಯಲ್ಲಿ ಆಟೋಮೆಷನ್ ಕಾರಣದಿಂದ ತಮ್ಮ ಬ್ಯಾಂಕಿಂಗ್ ಪ್ಲಾಟ್ ಫಾರ್ಮ್ ಇನ್ಫೋಸಿಸ್ ಫಿನಾಕಲ್ ಶೇ.20 ಹೆಚ್ಚುವರಿ ಉತ್ಪಾದಕತೆ ಸಾಧಿಸಿದೆ. ಆದ್ದರಿಂದ ಎಐಗೆ ಕೌಶಲಯುತ ಮಾನವ ಸಂಪನ್ಮೂಲ ಜತೆಯಾದರೆ ಉತ್ತಮ ಫಲಿತಾಂಶ ಸಿಗಲಿದೆ ಎಂದು ಹೇಳಿದ್ದಾರೆ.



















