ಮಂಗಳೂರು : ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತೆಯನ್ನು ಮೂವರು ಯುವಕರು ಅಪಹರಿಸಲು ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಸುದೆಮುಗೇರು ಎಂಬಲ್ಲಿ ನಡೆದಿದೆ.
ಮಾರುತಿ ಓಮ್ಮಿ ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಕಾರಿನ ಒಳಗೆಳೆದು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ. ಇಂದು ಬೆಳಗ್ಗೆ ಸುಮಾರು 8:30ಕ್ಕೆ ಸ್ಕೂಟರ್ ಇಟ್ಟು ಸಂತೆಕಟ್ಟೆಯಲ್ಲಿ ಬಸ್ ಹತ್ತಲು ತೆರಳುವಾಗ ಕಾರಿನಲ್ಲಿ ಬಂದವರು ತಡೆದು ನಿಲ್ಲಿಸಿದ್ದಾರೆ.
ಕಾರಿನ ನಂಬರ್ ಪ್ಲೇಟ್ ಗೆ ಬಟ್ಟೆ ಕಟ್ಟಿದ್ದು ಅದರಲ್ಲಿ ಮೂವರು ದುಷ್ಕರ್ಮಿಗಳು ಕೂಡ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರೆಂದು ತಿಳಿದುಬಂದಿದೆ. ಅಪ್ರಾಪ್ತೆಯನ್ನು ಕಾರಿನ ಒಳಗೆ ಎಳೆಯಲು ಯತ್ನಿಸಿದಾಗ, ಆಕೆ ಕಿರುಚಾಡಿ ವಿರೋಧ ವ್ಯಕ್ತಪಡಿಸಿದ್ದಾಳೆ.
ಇದೇ ವೇಳೆ, ಹಿಂಭಾಗದಿಂದ ಸ್ಕೂಟರ್ ಬರುವುದನ್ನು ನೋಡಿ ದುಷ್ಕರ್ಮಿಗಳು ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಯುವತಿಯ ಕೈಗೆ ಮತ್ತು ಬೆರಳಿಗೆ ಚೂರಿಯಿಂದ ಚುಚ್ಚಿದ ಗಾಯವಾಗಿದ್ದು, ಕಾಲೇಜು ಬ್ಯಾಗ್‌ನೊಂದಿಗೆ ಯುವಕರು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಆಗಮಿಸಿ ವಿದ್ಯಾರ್ಥಿನಿ ಬಳಿಯಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ–ಮಾರಾಟ ಆರೋಪ | ತಾಲೂಕು ಸಬ್ ರಿಜಿಸ್ಟ್ರಾರ್, ಬಾಂಡ್ ರೈಟರ್ ಬಂಧನ



















