ವಿಜಯಪುರ : ಪೊಲೀಸರ ಗುಂಡಿನ ದಾಳಿಗೆ ರೌಡಿಶೀಟರ್ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಯುನೂಸ್ ಇಕ್ಲಾಸ್ ಪಟೇಲ್ ಪೊಲೀಸರ ಗುಂಡಿನ ದಾಳಿಗೆ ಬಲಿಯಾದ ರೌಡಿಶೀಟರ್. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಯುನೂಸ್ ಕಾಲಿಗೆ ಫೈರಿಂಗ್ ಮಾಡಿದಾಗ ಈ ಘಟನೆ ನಡೆದಿದೆ.
ಆಗಿದ್ದೇನು?
ರೌಡಿಶೀಟರ್ ಯೂನಸ್ ಪಟೇಲ್ ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ವ್ಯಕ್ತಿಗೆ ಚಾಕು ತೋರಿಸಿ ರೂಪಾಯಿ 25 ಸಾವಿರ ಹಣ ದರೋಡೆ ಮಾಡಿದ್ದ. ಅಲ್ಲದೇ ಆತ ಸ್ಕೂಟಿಯನ್ನ ಸಹ ತೆಗೆದುಕೊಂಡು ಎಸ್ಕೇಪ್ ಆಗಿದ್ದ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಯೂನಸ್ ಸ್ವಗ್ರಾಮ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರೋ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಅದರಂತೆ ರಾಂಪುರ್ ಬಳಿ ಆರೋಪಿ ಯೂನಿಸ್ನ ಬಂಧಿಸಲು ಪೊಲೀಸರು ಮುಂದಾಗಿದ್ದರು. ಆದ್ರೆ ಆರೋಪಿ ಪೊಲೀಸರಿಗೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ. ಈ ವೇಳೆ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಆಯ ತಪ್ಪಿ ಕೆಳಗೆ ಬಿದ್ದರು.
ಕೂಡಲೇ ಆತ್ಮರಕ್ಷಣೆಗಾಗಿ ಆರೋಪಿ ಯುನೂಸ್ ಕಾಲಿಗೆ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಗುಂಡು ಹಾರಿಸಿದರು. ನಂತರ ಆರೋಪಿಯನ್ನ ಸಿಂದಗಿ ತಾಲೂಕು ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಯುನೂಸ್ ಸಾವನ್ನಪ್ಪಿದ್ದಾನೆ ಅಂತ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.