ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಆಹಾರ ಅಧಿಕಾರಿಗಳು ಸುಮಾರು 500 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಸೀಜ್ ಮಾಡಿದ್ದಾರೆ. ಈ ಅಕ್ಕಿಯನ್ನು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಹಣದಾಸೆಗೆ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದರು.
ಅನ್ನಭಾಗ್ಯ ಅಕ್ಕಿ ಖರೀದಿಸಿ ಲೋಡ್ ಮಾಡಿದಾಗ ಆಹಾರ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಹಾರ ಅಧಿಕಾರಿಗಳು ಬರುತ್ತಿದ್ದಂತೆ ಅಕ್ಕಿ ದಂಧೆಕೋರರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಟಾಟಾ ಏಸ್ ನಲ್ಲಿ ಅಕ್ಕಿ ಮೂಟೆ ತುಂಬಿಕೊಂಡಿದ್ದರು ಎನ್ನಲಾಗಿದೆ. ಮತ್ತೊಂದು ಕಡೆ ಹಳೇ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 50 ಕೆಜಿಯ ಎರಡು ಅನ್ನ ಭಾಗ್ಯ ಅಕ್ಕಿ ಮೂಟೆಗಳನ್ನು ಮಹಿಳೆಯೊಬ್ಬರು ಮಾರಾಟ ಮಾಡಲು ಬಂದಿದ್ದರು. ರೆಡ್ ಹ್ಯಾಂಡ್ ಆಗಿ ಮಹಿಳೆಯನ್ನು ಅಧಿಕಾರಿಗಳು ಹಿಡಿದಿದ್ದಾರೆ. ಈ ವೇಳೆ ಮಹಿಳೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಆದರೂ ಬಿಡದ ಅಧಿಕಾರಿಗಳು ಅಕ್ಕಿ ಸೀಜ್ ಮಾಡಿದ್ದಾರೆ.
ಬಡವರ ಅನುಕೂಲಕ್ಕೆಂದು ಸರ್ಕಾರಿ ಅಕ್ಕಿ ನೀಡಿದರೆ, ಅದನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಹಾಗೂ ಅಕ್ರಮವಾಗಿ ಸಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಅಧಿಕಾರಿಗಳು ಇವುಗಳ ವಿರುದ್ಧ ಸಮರ ಸಾರಿದ್ದಾರೆ.