ಹುಬ್ಬಳ್ಳಿ: ಪೊಲೀಸರ ಮೇಲೆಯೇ ಕಾರದ ಪುಡಿ ಎರಚಿ ಪರಾರಿಯಾಗಲು ಯತ್ನಿಸಿದ ಖದೀಮರ ಮೇಲೆ ಪೊಲೀಸರು (police) ಫೈರಿಂಗ್ ಮಾಡಿರುವ ಘಟನೆ ನಡೆದಿದೆ.
ಖದೀಮರ ವಿರುದ್ಧ ಹಬ್ಬಳ್ಳಿ ಸಬ್ ಅರ್ಬನ್ ಠಾಣೆಯ ಪೊಲೀಸರು 8 ಸುತ್ತು ಗುಂಡು ಹಾರಸಿದ್ದಾರೆ. ಮಾ. 1 ರಂದು ಸಭಾಪತಿ ಬಸವರಾಜ ಹೊರಟ್ಟಿ ನಿವಾಸದ ಹತ್ತಿರದ ಅಪಾರ್ಟ್ಮೆಂಟ್ನಲ್ಲಿ ಸುಮಾರು 20 ಲಕ್ಷ ರೂ ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು. ಅಲ್ಲದೇ, ಅವಳಿ ನಗರದ ಹಲವೆಡೆ ಈ ಹಿಂದೆ ಕೂಡ ಇದೇ ಮಾದರಿಯಲ್ಲಿ ಕಳ್ಳತನಗಳು ನಡೆದಿದ್ದವು. ಹೀಗಾಗಿ ಪೊಲೀಸರು ಒಂದೇ ಗ್ಯಾಂಗ್ ಈ ದರೋಡೆ ಮಾಡಿರಬಹುದು ಎಂದು ಶಂಕಿಸಿದ್ದರು. ಆನಂತರ ಈ ಗ್ಯಾಂಗ್ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಆಕ್ಟೀವ್ ಆಗಿರುವುದು ಪೊಲೀಸರಿಗೆ ಸುಳಿವು ಸಿಕ್ಕಿತ್ತು.
ದರೋಡೆಕೋರನನ್ನು ಟ್ರ್ಯಾಕ್ ಮಾಡಿದಾಗ ಶಿವಮೊಗ್ಗದಲ್ಲಿ ಇರುವುದು ಕಂಡು ಬಂದಿದೆ. ಆನಂತರ ಹುಬ್ಬಳ್ಳಿಯತ್ತ ಬರುವುದು ಗೊತ್ತಾಗಿದೆ. ಅದರಂತೆ ಹುಬ್ಬಳ್ಳಿಯಲ್ಲಿ ಮಾರುತಿ ಎನ್ನುವರರ ಮೇಲೆ ಹಲ್ಲೆ ಮಾಡಿದ ಈ ತಂಡ, ಬೈಕ್ ಕಸಿದುಕೊಂಡು ಪರಾರಿಯಾಗಿತ್ತು. ಹುಬ್ಬಳ್ಳಿ ಹೊರವಲಯದ ದೇವರ ಗುಡಿಹಾಳ ಸಮೀಪದಲ್ಲಿ ಅಡಗಿ ಕುಳಿತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ತೆರಳಿ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದರು.
ಈ ವೇಳೆ ಪೊಲೀಸ್ ಸಿಬ್ಬಂದಿ ಕಣ್ಣಿಗೆ ಕಾರದಪುಡಿ ಎರಚಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಇರ್ಷಾದ್, ಅಕ್ಬರ್ ಎಂಬುವವರ ಕಾಲಿಗೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ದಾಳಿ ವೇಳೆಯಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದ. ಪಿಎಸ್ಐ ದೇವೇಂದ್ರ ಮಾವಿನದಂಡಿ, ಸಿಬ್ಬಂದಿ ದ್ಯಾನೇಶ್, ಆನಂದ ಜಾವೂರಗೆ ಗಾಯಗಳಾಗಿವೆ.
ಆರೋಪಿಗಳು ತಮ್ಮ ದರೋಡೆ ಬಳಸುತ್ತಿದ್ದ ಐಷಾರಾಮಿ ಕಾರ್ ನ್ನೇ ಹುಬ್ಬಳ್ಳಿ ಹೈವೆ ಪಕ್ಕದಲ್ಲಿ ಸುಟ್ಟು ಹಾಕಿದ್ದಾರೆ. ಸುಮಾರು 10 ರಿಂದ 15 ಸದಸ್ಯರು ಇರುವ ಈ ತಂಡ, ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತ, ಪ್ರತಿಷ್ಠಿತ ಹೋಟೆಲ್ಗಳಲ್ಲಿ ಉಳಿದುಕೊಳ್ಳುತ್ತಿದ್ದರು ಎನ್ನಲಾಗಿದೆ.