ಬೆಂಗಳೂರು: ನಗರದ ಹೆಲ್ಮೆಟ್ ಅಂಗಡಿ ಹಾಗೂ ಮಳಿಗೆಗಳ ಮೇಲೆ ಸಂಚಾರ ಪೊಲೀಸರು, ಆರ್ ಟಿಓ, ಕಾನೂನು ಮಾಪನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕಳಪೆ ಗುಣಮಟ್ಟದ ಹಾಗೂ ಹಾಪ್ ಹೆಲ್ಮೆಟ್ ಮಾರಾಟ ಮಾಡುತ್ತಿರುವ ಕುರಿತು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ನಿಷೇಧ ಇದ್ದರೂ ಕಳಪೆ ಹಾಗೂ ಹಾಪ್ ಹೆಲ್ಮೆಟ್ ಮಾರಾಟವಾಗುತ್ತಿರುವ ಆರೋಪ ಕೇಳಿ ಬಂದಿದ್ದವು. ಹೀಗಾಗಿ ಹೆಲ್ಮೆಟ್ ಮಳಿಗೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ನಗರದ ಸಿದ್ಧಯ್ಯ ರಸ್ತೆ, ಕಲಾಸಿಪಾಳ್ಯ ರಸ್ತೆ, ಲಾಲ್ ಬಾಗ್ ರಸ್ತೆ, ಮಾಗಡಿ ರಸ್ತೆ, ಸುಮನಹಳ್ಳಿ, ವಿಜಯನಗರ, ಅಗ್ರಹಾರ ದಾಸರಹಳ್ಳಿ, ನಾಗರಭಾವಿ, ಔಟರ್ ರಿಂಗ್ ರಸ್ತೆ ಅಂಗಡಿಗಳು ಸೇರಿದಂತೆ ಒಟ್ಟು 19 ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ದಾಳಿಯ ನಂತರ ದಿ ಲೀಗಲ್ ಮೆಟ್ರಾಲಾಜಿ ಕಾಯ್ದೆ ಅನ್ವಯ ನೋಟಿಸ್ ನೀಡಲಾಗಿದೆ.
ದಾಳಿ ವೇಳೆ ಕಳಪೆ ಹಾಗೂ ಹಾಫ್ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಸುಮಾರು 6 ಅಂಗಡಿಗಳಿಗೆ ಮಾಪನ ಇಲಾಖೆಯು 50 ಸಾವಿರ ರೂ. ದಂಡ ವಿಧಿಸಿದೆ. ಉಳಿದ 13 ಅಂಗಡಿಗಳಿಗೆ ಕೋರ್ಟ್ ನಲ್ಲಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಅಲ್ಲದೇ ಕಳಪೆ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುತ್ತಿದ್ದವರಿಗೂ ದಂಡ ವಿಧಿಸಲಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳಿಂದ 38 ಬೈಕ್ ಸವಾರರಿಗೆ ದಂಡ ವಿಧಿಸಲಾಗಿದೆ. ಲೈಸೆನ್ಸ್ ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.



















