ಜಿಂಕೆ ಮಾಂಸ ಮಾರಾಟದ ಅಡ್ಡೆ ಮೇಲೆ ಬನ್ನೇರುಘಟ್ಟ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಜಿಆರ್ ಎಫ್ ಹರ್ಷವರ್ಧನ್ ತಂಡ ದಾಳಿ ನಡೆಸಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಬಸವನಪುರದ ಮನೆಯೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಜಿಂಕೆ, ಕಾಡು ಹಂದಿ ಮತ್ತು ಮುಳ್ಳು ಹಂದಿ ಮಾಂಸ ಪತ್ತೆಯಾಗಿದೆ. ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಮಾಂಸ ಮಾರಾಟ ಮಾಡುತ್ತಿದ್ದ ಸತ್ಯಪ್ರಕಾಶ್, ವೆಂಕಟೇಶ್ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಅಕ್ರಮವಾಗಿ ಜಿಂಕೆ ಕಾಡು ಹಂದಿ ಮಾರಾಟ ಮಾಡುತ್ತಿದ್ದರು. ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಹೊಮ್ಮದೇವನಹಳ್ಳಿ ಜಾನ್ ಪೀಟರ್ ನಾಪತ್ತೆಯಾಗಿದ್ದಾನೆ.
ಹನೂರು ಅರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆಯಾಡಿ ದುಬಾರಿ ಬೆಲೆಗೆ ಬನ್ನೇರುಘಟ್ಟ ಸುತ್ತಮುತ್ತ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳ ವಿರುದ್ಧ ಅರಣ್ಯ ಅತಿಕ್ರಮ ಪ್ರವೇಶ, ಕಾಡು ಪ್ರಾಣಿಗಳ ಅಕ್ರಮ ಬೇಟೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಕಲಂಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ.