ಬೆಂಗಳೂರು : ಎಚ್ಡಿಎಫ್ಸಿ ಬ್ಯಾಂಕ್, ಬಂಧನ್ ಬ್ಯಾಂಕ್ ಸೇರಿ ಹಲವು ಬ್ಯಾಂಕ್ಗಳು ATMಗಳಲ್ಲಿ ಹಣ ವಿತ್ ಡ್ರಾ ಮಾಡುವುದಕ್ಕೆ ಸಂಬಂಧಿಸಿದಂತೆ ಹೊಸ ಶುಲ್ಕಗಳನ್ನು ಪರಿಚಯಿಸುತ್ತಿವೆ. ಹಾಗಾದರೆ, ಏಪ್ರಿಲ್ 1ರಿಂದ ಯಾವೆಲ್ಲ ನಿಯಮಗಳು ಬದಲಾಗಲಿವೆ? ಇಲ್ಲಿದೆ ಮಾಹಿತಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊರತಾದ ಎಟಿಎಂಗಳಲ್ಲಿ ವಿತ್ ಡ್ರಾ ಮಾಡುವ ಉಚಿತ ಮಿತಿ ಮೀರಿದ ನಂತರ ಪ್ರತಿ ವಹಿವಾಟಿಗೆ 23 ರೂಪಾಯಿ ಹಾಗೂ ಜಿಎಸ್ಟಿ ವಿಧಿಸಲು ನಿರ್ಧರಿಸಿದೆ. ಅಲ್ಲದೆ, ದೇಶದಲ್ಲೇ ಬೃಹತ್ ಖಾಸಗಿ ಬ್ಯಾಂಕ್ ಎನಿಸಿರುವ ಎಚ್ಡಿಎಫ್ಸಿಯು ತನ್ನ ಉಳಿತಾಯ ಖಾತೆದಾರರಿಗೆ ಮೆಟ್ರೋ ನಗರಗಳಲ್ಲಿ 3 ಮತ್ತು ಇತರ ನಗರಗಳಲ್ಲಿ 5 ಉಚಿತ ವಹಿವಾಟುಗಳ ಮಿತಿಯನ್ನು ಮುಂದುವರಿಸಿದೆ.
ಆದರೆ, ವಿತ್ ಡ್ರಾ ಮಾಡುವ ಮಿತಿ ಮೀರಿದ ನಂತರದ ಹಣಕಾಸಿನ ವಹಿವಾಟಿಗೆ 25 ರೂಪಾಯಿ ಮತ್ತು ಬ್ಯಾಲೆನ್ಸ್ ಚೆಕ್ ಮಾಡುವುದು ಸೇರಿ ಇತರ ಹಣಕಾಸೇತರ ವಹಿವಾಟಿಗೆ ಎಚ್ಡಿಎಫ್ಸಿ ಬ್ಯಾಂಕ್ 12 ರೂಪಾಯಿ ಶುಲ್ಕ ವಿಧಿಸುತ್ತದೆ. ಹಾಗೆಯೇ, ಪ್ರತಿದಿನ ಎಟಿಎಂಗಳಲ್ಲಿ ಯುಪಿಐ ಮೂಲಕ ಗರಿಷ್ಠ 10 ಸಾವಿರ ರೂಪಾಯಿಗಳವರೆಗೆ ಮಾತ್ರ ನಗದು ಹಿಂಪಡೆಯಲು ಮಿತಿ ವಿಧಿಸಿದೆ. ತಿಂಗಳಿಗೆ ಇಂತಹ ಗರಿಷ್ಠ 5 ವಹಿವಾಟುಗಳನ್ನು ಮಾತ್ರ ಉಚಿತವಾಗಿ ಮಾಡಬಹುದು. ಇಲ್ಲದಿದ್ದರೆ ಶುಲ್ಕ ವಿಧಿಸಲಾಗುತ್ತದೆ.
ಬಂಧನ್ ಬ್ಯಾಂಕ್ ಕೂಡ ಹೊಸ ಶುಲ್ಕಗಳನ್ನು ಜಾರಿಗೆ ತರುತ್ತಿದೆ. ಉಚಿತ ಮಿತಿಯ ನಂತರದ ಪ್ರತಿ ಹಣಕಾಸು ವಹಿವಾಟಿಗೆ ಈ ಹಿಂದೆ ಇದ್ದ 21 ರೂಪಾಯಿ ಶುಲ್ಕವನ್ನು ಈಗ 25 ರೂಪಾಯಿಗೆ ಏರಿಸಿದೆ. ಹಾಗಾಗಿ, ಈ ಮೂರೂ ಬ್ಯಾಂಕ್ ಗಳ ಗ್ರಾಹಕರು ಎಟಿಎಂಗಳ ಮೂಲಕ ಹಣ ವಿತ್ ಡ್ರಾ ಮಾಡುವ ಮೊದಲು ನಿಯಮಗಳನ್ನು, ಶುಲ್ಕಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
ಇದನ್ನೂ ಓದಿ : ಹಾವೇರಿಯಲ್ಲಿ ಭಾರೀ ಗಾಳಿ ಮಳೆ – ಧರೆಗುರುಳಿದ ಮರ, ವಿದ್ಯುತ್ ಕಂಬಗಳು



















