ಇಸ್ಲಾಮಾಬಾದ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಗಡಿ ಸಂಘರ್ಷ ತೀವ್ರಗೊಂಡಿದ್ದು, ಪಾಕಿಸ್ತಾನವು ಬುಧವಾರ ಏಕಾಏಕಿ ಅಫ್ಘಾನಿಸ್ತಾನದ ಸ್ಪಿನ್ ಬೋಲ್ಡಾಕ್ ನಗರದ ಮೇಲೆ ವಾಯುದಾಳಿ ನಡೆಸಿದೆ. ಚಮನ್ ಗಡಿ ದಾಟುವಿಕೆ ಸಮೀಪದಲ್ಲೇ ಈ ದಾಳಿ ನಡೆದಿದ್ದು, ಹಲವು ತಾಲಿಬಾನ್ ನೆಲೆಗಳನ್ನು ಗುರಿಯಾಗಿಸಲಾಗಿದೆ ಎಂದು ವರದಿಯಾಗಿದೆ. ಈ ಘಟನೆಯು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸ್ಥಳೀಯ ಮೂಲಗಳ ಪ್ರಕಾರ, ಗಡಿಯಲ್ಲಿರುವ ಕನಿಷ್ಠ ಮೂರು ಆಫ್ಘನ್-ತಾಲಿಬಾನ್ ನೆಲೆಗಳ ಮೇಲೆ ಡ್ರೋನ್‌ಗಳು ಮತ್ತು ವೈಮಾನಿಕ ದಾಳಿಗಳು ನಡೆದಿವೆ. ಈ ದಾಳಿಯಲ್ಲಿ ಕನಿಷ್ಠ ನಾಲ್ವರು ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸುಮಾರು 10 ನಾಗರಿಕರನ್ನು ಚಮನ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ದಾಳಿ ನಡೆದ ಸ್ಥಳದಿಂದ ದಟ್ಟ ಕಪ್ಪು ಹೊಗೆ ಏಳುತ್ತಿರುವ ದೃಶ್ಯಗಳು ವಿಡಿಯೋಗಳಲ್ಲಿ ಸೆರೆಯಾಗಿವೆ.

“ಗಡಿ ಬಂದ್”
ಅಕ್ಟೋಬರ್ 11ರ ರಾತ್ರಿ ಆಫ್ಘನ್ ಪಡೆಗಳು ಪಾಕಿಸ್ತಾನದ ಹಲವು ಸೇನಾ ನೆಲೆಗಳ ಮೇಲೆ ದಾಳಿ ಮಾಡಿದಾಗಿನಿಂದ ಎರಡೂ ದೇಶಗಳ ನಡುವೆ ಸಂಘರ್ಷ ಆರಂಭವಾಗಿದೆ. ಅಂದಿನಿಂದ ನಡೆದ ಮಾರಣಾಂತಿಕ ಘರ್ಷಣೆಗಳಿಂದಾಗಿ ಗಡಿ ಬಂದ್ ಆಗಿದ್ದು, ನೂರಾರು ಜನರು ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಇದೇ ವೇಳೆ ತಮ್ಮ ದೇಶದ ವಾಯುಪ್ರದೇಶ ಮತ್ತು ಭೂಪ್ರದೇಶವನ್ನು ಪಾಕಿಸ್ತಾನ ಪದೇ ಪದೇ ಉಲ್ಲಂಘಿಸಿದ್ದಕ್ಕೆ ಪ್ರತೀಕಾರವಾಗಿ 58 ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ, ಗಡಿಯುದ್ದಕ್ಕೂ ನಡೆದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ತಮ್ಮ 23 ಸೈನಿಕರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು “ತಾಲಿಬಾನ್ ಮತ್ತು ಆ ಸಂಘಟನೆಗೆ ಸಂಬಂಧಿಸಿದ ಭಯೋತ್ಪಾದಕರನ್ನು” ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ಹೇಳಿದೆ.
ಈ ಸಂಘರ್ಷದ ಹಿನ್ನೆಲೆಯಲ್ಲಿ, ಪಾಕಿಸ್ತಾನದೊಂದಿಗಿನ ಎಲ್ಲಾ ಗಡಿಗಳನ್ನು ವ್ಯಾಪಾರ ಮತ್ತು ಜನರ ಸಂಚಾರಕ್ಕೆ ಸೋಮವಾರದಿಂದ ಮುಚ್ಚಲಾಗಿದೆ. ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸದಸ್ಯರಿಗೆ ಕಾಬೂಲ್ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ದೀರ್ಘಕಾಲದಿಂದ ಆರೋಪಿಸುತ್ತಿದೆ. ಆದರೆ, ತಮ್ಮ ನೆಲವನ್ನು ಬೇರೆ ದೇಶಗಳ ವಿರುದ್ಧ ಬಳಸಲು ಅನುಮತಿ ನೀಡುವುದಿಲ್ಲ ಎಂದು ಅಫ್ಘಾನಿಸ್ತಾನ ಈ ಆರೋಪವನ್ನು ನಿರಾಕರಿಸುತ್ತಾ ಬಂದಿದೆ. ಹಿಂದೆಯೂ ಗಡಿಯಲ್ಲಿ ಸಣ್ಣಪುಟ್ಟ ಚಕಮಕಿಗಳು ನಡೆದಿದ್ದರೂ, ಪ್ರಸ್ತುತ ಸಂಘರ್ಷವು ಭೀಕರ ರೂಪ ತಳೆಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.