ಭಾರತ ಮೂಲದ ಅಮೇರಿಕ ಗಗನಯಾತ್ರಿ “ಸುನಿತಾ ವಿಲಿಯಮ್ಸ್” ಮತ್ತು ನಾಸಾ ಗಗನಯಾತ್ರಿ “ಬುಚ್ ವಿಲ್ಮೋರ್” ಅವರುಗಳನ್ನು ಹೊತ್ತ ಬಾಹ್ಯಾಕಾಶ ನೌಕೆಯು, ಕೇಂದ್ರ ಬಾಹ್ಯಾಕಾಶ ಅಂಗಳಕ್ಕೆ ಯಶಸ್ವಿ ಉಡ್ಡಯನಗೊಂಡಿದೆ. ಹಲವು ಸಾರಿ ಲೋಪದೋಷದೊಂದಿಗೆ ಉಡ್ಡಯನದಲ್ಲಿ ವಿಳಂಬ ಕಂಡು, ಕೊನೆಗೂ ಬಾಹ್ಯಾಕಾಶಕ್ಕೆ ನೆಗೆಯುವಲ್ಲಿ ನೌಕೆ ಯಶಸ್ವಿಯಾಗಿದೆ. ಉಡಾವಣೆಗೊಂಡ ನೌಕೆಯು “ಸ್ಟಾರ್ ಲೈನರ್” ಆಗಿದ್ದು, ನೌಕೆಗೆ “ಕ್ಯಾಲಿಪ್ಸೋ” ಎಂದು ಹೆಸರಿಡಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ “ರಾತ್ರಿ 9:30ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪುವ ನಿರೀಕ್ಷೆ” ಇಡಲಾಗಿದೆ.

ವಿಶೇಷವಾಗಿ ಮೂರನೇ ಬಾರಿಗೆ ಬಾಹ್ಯಾಕಾಶ ನೌಕಾಯಾನ ಮಾಡುತ್ತಿರುವ ಸುನಿತಾ ವಿಲಿಯಮ್ಸ್, ಭಾರತ ಮೂಲ ಹೊಂದಿರುವ ಅಮೇರಿಕಾದ ಗಗನಯಾತ್ರಿ. ಗುಜರಾತಿನ ದೀಪಕ್ ಪಾಂಡ್ಯ ಹಾಗೂ ಸ್ಲೊವೇನಿಯದ ಬೋನಿ ಪಾಂಡ್ಯ ಅವರ ಮಗಳಾಗಿ ಜನಿಸಿದ ಇವರಿಗೆ ಸದ್ಯ 58ರ ಇಳಿ ವಯಸ್ಸು. ಮೊದಲಿಗೆ ಇವರು 1987ರಲ್ಲಿ ಅಮೇರಿಕಾದಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡು ವೃತ್ತಿ ಜೀವನ ಪ್ರಾರಂಭಿಸುತ್ತಾರೆ. ತದನಂತರದಲ್ಲಿ 1989 ರಲ್ಲಿ ನೌಕಾ ಚಾಲಕರಾಗುತ್ತಾರೆ.
ಮುಂದೆ 1998ರಲ್ಲಿ ನಾಸಾಕ್ಕೆ ಆಯ್ಕೆಯಾಗಿ 2006ರ ಎಕ್ಸ್ಪೀಡಿಷನ್14/15 ಹಾಗೆ 2012ರ ಎಕ್ಸ್ಪೀಡಿಷನ್ 32/33 ರಲ್ಲಿ ಗಗನಯಾತ್ರಿಯಾಗಿ ಬಾನಂಗಳಕ್ಕೆ ಹೋಗಿದ್ದರು. ಇದೀಗ ಮೂರನೇ ಬಾರಿಗೆ ನಿನ್ನೆ(ಜೂನ್5) ರಂದು ತೆರಳಿದ್ದಾರೆ.
ನಾಸಾ ತಿಳಿಸಿರುವಂತೆ ಈ ಹಿಂದೆ ಸುನಿತಾ ಅವರು ಬಾಹ್ಯಕಾಶದಲ್ಲಿ 322 ದಿನ ಕಳೆದಿದ್ದಾರೆ ಹಾಗೇ 50ಗಂಟೆ 40 ನಿಮಿಷದ ಬಾಹ್ಯಕಾಶದ ನಡಿಗೆ ಕೂಡ ಕೈಗೊಂಡಿರುವ ಈ ವಿಶೇಷ ಸಾಧಕಿಯು, ಇನ್ನೇನು ನೌಕೆ ಗಗನಕ್ಕೆ ನೆಗೆಯುವ ಹೊತ್ತಲ್ಲಿ , “ನಡೆ ‘ಕ್ಯಾಲಿಪ್ಸೊ’, ನಮ್ಮನ್ನು ಬಾಹ್ಯಾಕಾಶಕ್ಕೆ ಕರೆದೊಯ್ದು ಮರಳಿ ಕರೆ ತಾ” ಎಂದು ಸಂದೇಶ ಹೇಳಿ ಹೋಗಿದ್ದಾರೆ. ಸದ್ಯ ಇದು ಎಲ್ಲರನ್ನೂ ಭಾವುಕವಾಗಿಸಿದೆ.
ಇನ್ನು ಈ ಹಿಂದೆ ಎರಡು ಬಾರಿಯ ಗಗನಯಾತ್ರೆಯ ಸಮಯದಲ್ಲಿ ಭಗವದ್ಗೀತೆ ಹಾಗೂ ಗಣೇಶನ ಮೂರ್ತಿಯನ್ನು ತೆಗೆದುಕೊಂಡು ಹೋಗಿದ್ದು, ಈ ಬಾರಿಯೂ ಸಹಾ ಗಣೇಶನನ್ನ ಜೊತೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಭೂಮಿಯಿಂದ ಸುಮಾರು 400km ದೂರದಲ್ಲಿರುವ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ನಿಗೆ ಹೋಗುತ್ತಿದ್ದು,
ಎರಡು ವಾರಗಳ ಈ ಗಗನಯಾನ ಯಶಸ್ವಿಯಾಗಿ ಮುಗಿಸಿಕೊಂಡು, ಸುರಕ್ಷಿತವಾಗಿ ಮರಳಿ ಬರಲೆಂದು ಆಶಿಸೋಣ.
