ಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಜಿಲ್ಲೆಯ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಹತ್ತಿರ ಈ ಘಟನೆ ನಡೆದಿದೆ. ಆರೋಪಿ ಬಗರ್ ಅಲಿ ಇರಾನಿ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಆರೋಪಿಯನ್ನು ಗಂಗಾವತಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬೆಟಗೇರಿ ಬಡಾವಣೆ ಪೊಲೀಸರು ಬಂಧಿಸಿದ್ದರು. ಆದರೆ, ಹೊಳೆಆಲೂರಗೆ ಪಂಚನಾಮೆಗೆ ಹೋಗಿ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸದ್ಯ ಆರೋಪಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಬಗರ್ ಅಲಿ ಇರಾನಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಆಗಲು ಯತ್ನಿಸಿದ್ದ. ಬಡಾವಣೆ ಠಾಣೆ ಸಿಬ್ಬಂದಿ ಹನುಮಂತ ಓಲೇಕಾರ, ಅಶೋಕ್ ಗಡದ ಮೇಲೆ ಹಲ್ಲೆ ಮಾಡಲಾಗಿದೆ.
ಗದಗ ನಗರದ ಹೆಲ್ತ್ ಕ್ಯಾಂಪ್ ಬಳಿ ಕಳ್ಳತನದ ಆರೋಪದ ಮೇಲೆ ಗಂಗಾವತಿ ಪೊಲೀಸರು ಕರೆದುಕೊಂಡು ಹೋಗುವಾಗ ಹಲ್ಲೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.