ಇಸ್ಲಾಮಾಬಾದ್: ಆಪರೇಷನ್ ಸಿಂದೂರ(Operation Sindoor) ಕಾರ್ಯಾಚರಣೆಯ ನಂತರ ಸುಳ್ಳು ಸುದ್ದಿಗಳ ಕ್ಷಿಪಣಿಗಳನ್ನು ಹಾರಿಸಿ, ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸಿದ್ದ ಪಾಕಿಸ್ತಾನ(Pakistan) ತನ್ನ ಸುಳ್ಳಿನ ಸರಮಾಲೆಯನ್ನು ಮುಂದುವರಿಸಿದೆ. ಈಗ ಪಾಕ್ ಸೇನಾ ಮುಖ್ಯಸ್ಥರೇ ಮತ್ತೊಂದು ಸುಳ್ಳಿನ ಮೂಲಕ ಜಗತ್ತಿನೆದುರುದು ಬೆತ್ತಲಾಗಿದ್ದಾರೆ. ಯಾವತ್ತೋ ಚೀನಾ ಸೇನೆಯು ನಡೆಸಿದ್ದ ಸಮರಾಭ್ಯಾಸದ ದೊಡ್ಡ ಫೋಟೋಗೆ ಫ್ರೇಮ್ ಹಾಕಿಸಿ, ಇದು ಪಾಕಿಸ್ತಾನವು ಇತ್ತೀಚೆಗೆ ಭಾರತದ ಮೇಲೆ ನಡೆಸಿದ ದಾಳಿಯ ಫೋಟೋ ಎಂದು ಸುಳ್ಳು ಹೇಳಿ, ಅದೇ ಫೋಟೋವನ್ನು ಪ್ರಧಾನಮಂತ್ರಿ ಶೆಹಬಾಜ್ ಷರೀಫ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಭಾರತದ ವಿರುದ್ಧ ಪಾಕ್ ನಡೆಸಿದ ಆಪರೇಷನ್ ಬುನ್ಯಾನ್‌ನ ಚಿತ್ರ ಎಂದು ಅವರು ವಾದಿಸಿದ್ದಾರೆ. ಈ ಮೂಲಕ ಪಾಸ್ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್(Pakistan Army Chief Field Marshal Asim Munir) ನಗೆಪಾಟಲಿಗೀಡಾಗಿದ್ದಾರೆ.
ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರ ನೆಲೆಗಳು ಹಾಗೂ ಅಲ್ಲಿನ ಸೇನಾ ನೆಲೆಗಳ ಮೇಲೆ ನಡೆಸಿದ ದಾಳಿ ಮತ್ತು ಅದರ ಪರಿಣಾಮವೆಂಬಂತೆ ಧ್ವಂಸಗೊಂಡ ನೆಲೆಗಳನ್ನು ಫೋಟೋ, ವಿಡಿಯೋಗಳನ್ನು ಸಾಕ್ಷಿಯಾಗಿಟ್ಟುಕೊಂಡು ಪ್ರತಿ ದಿನ ಸುದ್ದಿಗೋಷ್ಠಿಯನ್ನು ನಡೆಸಿತ್ತು. ಆದರೆ, ಪಾಕ್ ಸೇನೆಯ ಮುನೀರ್ ಅವರು ತಾವು ಸಾಧಿಸದೇ ಇರುವ ವಿಜಯವನ್ನು ತಮ್ಮದೆಂದು ಹೇಳಿಕೊಳ್ಳುತ್ತಾ ಬೇರೆ ದೇಶಗಳ ಸೈನ್ಯದ ಫೋಟೋವನ್ನು ತಮ್ಮದೆಂದು ಹೇಳಿಕೊಂಡು ವಿಜೃಂಭಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೀಮ್ ಗಳ ಸೃಷ್ಟಿಗೆ ಕಾರಣವಾಗಿದೆ.
ಈ ಫೋಟೋವು ಚೀನಾದ ಸೇನೆಯ ಕವಾಯತಿನ ಫೋಟೋವಾಗಿದೆ. ಇದು ಕಳೆದ 5 ವರ್ಷಗಳಲ್ಲಿ ಹಲವು ಬಾರಿ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಚೀನಾದ ಬಹು ರಾಕೆಟ್ ಲಾಂಚರ್ ಪಿಎಚ್ಎಲ್-03ರ ಫೋಟೋ ಇದಾಗಿದೆ. 2019ರಲ್ಲಿ ಈ ಫೋಟೋವನ್ನು ಹುವಾಂಗ್ ಹೈ ಎಂಬ ಫೋಟೋಗ್ರಾಫರ್ ಸೆರೆಹಿಡಿದಿದ್ದರು.
ಈಗ ಪಾಕ್ ಸೇನೆಯ ಮುಖ್ಯಸ್ಥ ಮುನೀರ್ ಅವರು ಹೈಪ್ರೊಫೈಲ್ ಡಿನ್ನರ್ ಪಾರ್ಟಿಯೊಂದರಲ್ಲಿ ಈ ಫೋಟೋವನ್ನು ಪ್ರಧಾನಿ ಶೆಹಬಾಜ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋ ಬಹಿರಂಗವಾಗುತ್ತಲೇ ನೆಟ್ಟಿಗರು, ಅದರ ಅಸಲಿಯತ್ತನ್ನು ಬಯಲಿಗೆಳೆದಿದ್ದಾರೆ. ಇದು ಆಪರೇಷನ್ ಬುನ್ಯನ್ ಅಲ್ ಮರ್ಮೂಸ್ ಫೋಟೋ ಅಲ್ಲ, ಅದು 2019ರಲ್ಲಿ ಚೀನಾ ನಡೆಸಿದ ಕವಾಯತಿನ ಫೋಟೋ ಎಂದು ವ್ಯಂಗ್ಯವಾಡಿದ್ದಾರೆ. “ಪಾಕ್ ಸೇನಾ ಮುಖ್ಯಸ್ಥರು ಚೀನಾ ಸೇನೆಯ ಕವಾಯತಿನ ಫೋಟೋವನ್ನು ಆಪರೇಷನ್ ಬುನ್ಯನ್ ಸ್ಮರಣಿಕೆಯಾಗಿ ಪ್ರಧಾನಿಗೆ ನೀಡಿದ್ದಾರೆ. ಅವರಿಗೆ ಗೂಗಲ್ ಇಮೇಜ್ ಸರ್ಚ್ ಎಂಬುದೊಂದು ಇದೆ ಎಂದೇ ಗೊತ್ತಿರಲಿಕ್ಕಿಲ್ಲ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.