ಏಷ್ಯನ್ ಹಾಲಿ ಹಾಗೂ 4 ಬಾರಿಯ ಚಾಂಪಿಯನ್ ಭಾರತ ಹಾಕಿ ತಂಡ ತನ್ನ ಗೆಲುವಿನ ನಾಗಲೋಟ ಮುಂದುವರೆಸಿದೆ. ಈ ಬಾರಿಯ ಟೂರ್ನಿಯಲ್ಲಿ ಭಾರತ ತಂಡ ಸತತ 4ನೇ ಗೆಲುವು ಸಾಧಿಸಿದೆ. ಗುರುವಾರ ದಕ್ಷಿಣ ಕೊರಿಯಾ ವಿರುದ್ಧ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ 3-1 ಗೋಲುಗಳ ಜಯ ದಾಖಲಿಸಿದೆ.
ಒಲಿಂಪಿಕ್ಸ್ ಕಂಚು ಪದಕ ಗೆದ್ದಿರುವ ಭಾರತ ತಂಡ ಈ ಪಂದ್ಯದಲ್ಲಿ ಅರೈಜೀತ್ ಸಿಂಗ್ ಹಾಗೂ ಹರ್ಮನ್‌ಪ್ರೀತ್ ಗೆಲುವಿನ ರೂವಾರಿಯಾದರು. ಅರೈಜೀತ್ 8ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರೆ, ಹರ್ಮನ್ 2 ಗೋಲು ದಾಖಲಿಸಿದರು. ಕೊರಿಯಾ 30ನೇ ನಿಮಿಷದಲ್ಲಿ ತಂಡದ ಪರ ಏಕೈಕ ಗೋಲು ಬಾರಿಸಿತು.
ಇದಕ್ಕೂ ಮುನ್ನ ನಡೆದಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ ಚೀನಾ ವಿರುದ್ಧ 3-0, ಜಪಾನ್ ವಿರುದ್ಧ 5-0 ಹಾಗೂ ಮಲೇಷ್ಯಾ ವಿರುದ್ಧ 8-1 ಗೋಲುಗಳಿಂದ ಗೆದ್ದು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ, ಲೀಗ್ ಹಂತದ ಕೊನೆ ಪಂದ್ಯದಲ್ಲಿ ಶನಿವಾರ ಪಾಕಿಸ್ತಾನ ವಿರುದ್ಧ ಸೆಣಸಾಟ ನಡೆಸಲಿದೆ. ಸೋಮವಾರ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಭಾರತದ ಸೆಮೀಸ್ ಎದುರಾಳಿ ಯಾರು ಎಂಬುವುದು ಇನ್ನೂ ಪಕ್ಕಾ ಆಗಿಲ್ಲ.