ದುಬೈ: ಏಷ್ಯಾ ಕಪ್ 2025ರ ಸೂಪರ್ 4 ಹಂತದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಕೇವಲ 39 ಎಸೆತಗಳಲ್ಲಿ 74 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಕ್ರಿಕೆಟ್ ಗುರು ಯುವರಾಜ್ ಸಿಂಗ್ ಅವರ ಹೆಸರಿನಲ್ಲಿದ್ದ ಮಹತ್ವದ ದಾಖಲೆಯೊಂದನ್ನು ಮುರಿದಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಸಾಹಿಬ್‌ಜಾದಾ ಫರ್ಹಾನ್ ಅವರ ಅರ್ಧಶತಕದ (58) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 171 ರನ್ ಗಳಿಸಿತು. ಈ ಸವಾಲಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ (47) ಮೊದಲ ವಿಕೆಟ್‌ಗೆ 105 ರನ್‌ಗಳ ಶತಕದ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿದರು.
ಅಭಿಷೇಕ್ ತಮ್ಮ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಸಿಡಿಸಿ ಪಾಕ್ ಬೌಲರ್‌ಗಳನ್ನು ದಂಡಿಸಿದರು. ಈ ಸ್ಪೋಟಕ ಬ್ಯಾಟಿಂಗ್ ವೇಳೆ ಅವರು ಕೇವಲ 24 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದರೊಂದಿಗೆ, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅತಿ ವೇಗದ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಈ ಹಿಂದೆ ಈ ದಾಖಲೆ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹೆಸರಿನಲ್ಲಿತ್ತು. ಯುವರಾಜ್ 2012ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು, ಇದುವರೆಗಿನ ವೇಗದ ಅರ್ಧಶತಕವಾಗಿತ್ತು. ಇದೀಗ ಅಭಿಷೇಕ್, ತಮ್ಮ ಗುರುವಿನ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂತಿಮವಾಗಿ ತಿಲಕ್ ವರ್ಮಾ ಅವರ ಸಮಯೋಚಿತ ಆಟದಿಂದ ಭಾರತ 18.5 ಓವರ್‌ಗಳಲ್ಲಿ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಈ ಪಂದ್ಯದ ವೇಳೆ ಅಭಿಷೇಕ್ ಶರ್ಮಾ ಮತ್ತು ಪಾಕ್ ವೇಗ ಹ್ಯಾರಿಸ್ ರೌಫ್ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.