ಚೆನ್ನೈ: ಕಳೆದೊಂದು ವರ್ಷದಲ್ಲಿ ಟೀಮ್ ಇಂಡಿಯಾ ತವರಿನಲ್ಲಿ ಸತತ ಎರಡು ಬಾರಿ ವೈಟ್‌ವಾಶ್ ಮುಖಭಂಗ ಅನುಭವಿಸಿದ ನಂತರ, ವಿರಾಟ್ ಕೊಹ್ಲಿ ಮತ್ತೆ ಟೆಸ್ಟ್ ತಂಡಕ್ಕೆ ಮರಳಬೇಕು ಎಂಬ ಕೂಗು ಜೋರಾಗಿದೆ. ಕೆಲ ವರದಿಗಳ ಪ್ರಕಾರ ಬಿಸಿಸಿಐ ಕೂಡ ಕೊಹ್ಲಿಯನ್ನು ಸಂಪರ್ಕಿಸಿ ನಿವೃತ್ತಿ ವಾಪಸ್ ಪಡೆಯುವಂತೆ ಮನವೊಲಿಸಲು ಮುಂದಾಗಿತ್ತು ಎನ್ನಲಾಗಿತ್ತು. ಆದರೆ, ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ತಮ್ಮ ‘ಆಶ್ ಕಿ ಬಾತ್’ (Ash Ki Baat) ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, ಕೊಹ್ಲಿಯಂತಹ ದಿಗ್ಗಜ ಆಟಗಾರರು ಯಾವುದೇ ನಿರ್ಧಾರವನ್ನು ಆಲೋಚಿಸದೇ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಕೊಹ್ಲಿ ನಿವೃತ್ತಿ ಬಗ್ಗೆ ಮತ್ತೆ ಯೋಚಿಸಲು ಇನ್ನೇನಿದೆ? ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವಾಗ ಸಾಕಷ್ಟು ಯೋಚಿಸಿಯೇ ಆ ನಿರ್ಧಾರಕ್ಕೆ ಬಂದಿರುತ್ತಾರೆ. ಯಾರೂ ಕೂಡ ಭಾವೋದ್ರೇಕದಿಂದ ಇಂತಹ ದೊಡ್ಡ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಕೊಹ್ಲಿ ಆ ಹಂತವನ್ನು ದಾಟಿ ಮುನ್ನಡೆದಿದ್ದಾರೆ,” ಎಂದು ಅಶ್ವಿನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವರದಿ ನಿರಾಕರಣೆ
ಒಂದೆಡೆ ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಅವರು ಕೊಹ್ಲಿ ಸಂಪರ್ಕಿಸಿದ ವರದಿಗಳನ್ನು ತಳ್ಳಿಹಾಕಿದ್ದರೆ, ಮತ್ತೊಂದೆಡೆ ರಾಂಚಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಸ್ವತಃ ವಿರಾಟ್ ಕೊಹ್ಲಿ, “ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣ ನಿವೃತ್ತರಾಗುವವರೆಗೂ ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತೇನೆ,” ಎಂದು ಸ್ಪಷ್ಟಪಡಿಸುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಅಶ್ವಿನ್ ಪ್ರಕಾರ, ಅಭಿಮಾನಿಗಳು ಕೊಹ್ಲಿಯ ಇತ್ತೀಚಿನ ವೈಟ್ ಬಾಲ್ ಫಾರ್ಮ್ ನೋಡಿ ಟೆಸ್ಟ್ ಕಮ್‌ಬ್ಯಾಕ್ ಬಯಸುವುದು ಸಹಜ. “ನಿನ್ನೆ ಅವರು ಬ್ಯಾಟಿಂಗ್ ಮಾಡಿದ ರೀತಿ ನೋಡಿ ಅಭಿಮಾನಿಗಳಿಗೆ ಆಸೆ ಹುಟ್ಟುವುದು ತಪ್ಪಲ್ಲ. ಆದರೆ ಟೆಸ್ಟ್ ಕ್ರಿಕೆಟ್ ಎನ್ನುವುದು ಸಂಪೂರ್ಣ ಬೇರೆಯದೇ ಆಟ.
ಕೊಹ್ಲಿ ಆ ಬಗ್ಗೆ ಈಗಾಗಲೇ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈಗ ಪದೇ ಪದೇ ಅದನ್ನೇ ಕೆದಕುವುದು ಸರಿಯಲ್ಲ. ಟೀಮ್ ಇಂಡಿಯಾ ಈಗ ಪರಿವರ್ತನೆಯ ಹಾದಿಯಲ್ಲಿದೆ (Transition Phase). ಶುಭಮನ್ ಗಿಲ್ ಅವರಂತಹ ಯುವ ಆಟಗಾರರು ಆ ಜಾಗವನ್ನು ತುಂಬಿದ್ದಾರೆ. ನಾವು ಮುಂದಿನದನ್ನು ನೋಡಿಕೊಂಡು ಹೋಗಬೇಕೇ ಹೊರತು ಹಳೇದನ್ನೇ ಹಿಡಿದು ಕೂರುವುದಲ್ಲ,” ಎಂದು ಅಶ್ವಿನ್ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ; ಗಂಭೀರ್-ಆಯ್ಕೆಗಾರರ ಜೂಜು ಫಲಿಸಿತೇ? : ಹರ್ಷಿತ್ ರಾಣಾ ಮೇಲಿನ ನಂಬಿಕೆಗೆ ಸಂದೀಪ್ ಶರ್ಮಾ ಕೊಟ್ಟ ಕಾರಣ ವೈರಲ್!



















