ಹೈದರಾಬಾದ್: ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಶಿಶುಗಳ ಆರೋಗ್ಯ ಕಾಪಾಡುವುದು ಸೇರಿ ಹಲವು ಮಹತ್ವದ ಜವಾಬ್ದಾರಿ ನಿಭಾಯಿಸುತ್ತಾರೆ. ಆದರೆ, ಹೈದರಾಬಾದ್ ಬಳಿಕ ರಚಕೊಂಡ ಎಂಬ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯೊಬ್ಬಳು (ASHA Worker) ಸುಮಾರು 25 ಶಿಶುಗಳನ್ನು ಮಾರಾಟ ಮಾಡುವ ಮೂಲಕ ಆಶಾ ಕಾರ್ಯಕರ್ತೆಯರ ಹುದ್ದೆಗೇ ಕಳಂಕ ತಂದಿದ್ದಾಳೆ.
ರಚಕೊಂಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 25 ಮಕ್ಕಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದು, 11 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಇಡೀ ದಂಧೆಯ ಕಿಂಗ್ ಪಿನ್ ಆಗಿದ್ದೇ ಅಮೂಲ್ಯ ಎಂಬ ಆಶಾ ಕಾರ್ಯಕರ್ತೆ ಎಂಬುದು ಬಯಲಾಗಿದೆ. ಪೊಲೀಸರು ಈಕೆಯನ್ನು ಕೂಡ ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
3-6 ಲಕ್ಷ ರೂ.ಗೆ ಮಕ್ಕಳ ಮಾರಾಟ
ಗ್ರಾಮೀಣ ಪ್ರದೇಶದಿಂದ ಮಕ್ಕಳನ್ನು ಅಪಹರಿಸಿ, ಸುಮಾರು 3-6 ಲಕ್ಷ ರೂ.ಗೆ ಆ ಮಕ್ಕಳನ್ನು ಮಾರಾಟ ಮಾಡುವ ದೊಡ್ಡ ಜಾಲವೇ ನಿರ್ಮಾಣವಾಗಿತ್ತು. ಕೆಲ ತಿಂಗಳಲ್ಲಿ ಸುಮಾರು 25 ಮಕ್ಕಳನ್ನು ಮಾರಾಟ ಮಾಡಲಾಗಿತ್ತು. ಗಂಡು ಮಗುವಾದರೆ ಹೆಚ್ಚು ಹಣ ಪಡೆದು, ಹೆಣ್ಣು ಮಗುವಾದರೆ ಕಡಿಮೆ ಹಣ ಪಡೆದು ಮಾರಾಟ ಮಾಡಲಾಗುತ್ತಿತ್ತು. ಇದೆಲ್ಲದರ ನೇತೃತ್ವವನ್ನು ಅಮೂಲ್ಯ ವಹಿಸಿಕೊಂಡಿದ್ದಳು ಎನ್ನಲಾಗಿದೆ. ಅಮೂಲ್ಯ ಹೈದರಾಬಾದಿನ ಮಾಲಕ್ ಪೇಟ್ ನಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೋಲ ಕೃಷ್ಣವೇಣಿ, ದೀಪ್ತಿ ಎಂಬ ಆರೋಪಿಗಳು ಕೂಡ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ. ಪೊಲೀಸರು ನಡೆಸಿದ ಸುದೀರ್ಘ ಕಾರ್ಯಾಚರಣೆಯ ವೇಳೆ ನಾಲ್ಕು ಶಿಶುಗಳನ್ನು ರಕ್ಷಿಸಲಾಗಿದೆ. ನಾಲ್ಕೂ ಮಕ್ಕಳನ್ನು ಆರೋಪಿಗಳು ಗುಜರಾತ್ ಸೇರಿ ಹಲವು ರಾಜ್ಯಗಳಿಗೆ ಮಾರಾಟ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ನಂಟು ಹೊಂದಿರುವ ಆರೋಪಿಗಳು, ಅಲ್ಲಿಂದ ಮಕ್ಕಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.