ರಾಜ್ಯದ ನಂಬಿಕೆಯ ಪ್ರತೀಕದಂತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಅಂಗ ಸಂಸ್ಥೆಯಾಗಿ ಸ್ಥಾಪನೆಗೊಂಡು, ಹಲವು ವರ್ಷಗಳಿಂದ ನಿರುದ್ಯೋಗಿಗಳ ಬದುಕಿಗೆ ಆಸರೆಯಾಗಿ, ಉಚಿತ ತರಬೇತಿಯೊಂದಿಗೆ, ಸ್ವ-ಉದ್ಯೋಗ ಕಲ್ಪಿಸಿಕೊಳ್ಳುವ ಶಕ್ತಿ ತುಂಬುತ್ತಾ, ಅನೇಕರಿಗೆ ಬದುಕು ಕಟ್ಟಿಕೊಡುತ್ತಾ ಸಾಗುತ್ತಿರುವ ಸಂಸ್ಥೆಯೇ ‘ರುಡ್ಸೆಟಿ'(Rural Development and Self Employment Training Institute=RUDSETI).
ಹಾಗೆ ಏನೇನೂ ಅಲ್ಲದೆ ಈ ಸಂಸ್ಥೆಗೆ ಸೇರಿಕೊಂಡು ಸ್ವ-ಉದ್ಯೋಗ ಸಂಬಂಧಿತ ತರಬೇತಿ ಪಡೆದು, ಸ್ವಂತ ಉದ್ಯಮ ತೆರೆದು, ಯಶಸ್ವಿ ಉದ್ಯಮಿಗಳಾಗಿ, ಅಂದುಕೊಂಡಿದ್ದನ್ನೆಲ್ಲಾ ಸಾಧಿಸಿತೋರಿಸಿದವರು ಅನೇಕರಿದ್ದಾರೆ. ಅದು ಆ ಸಂಸ್ಥೆಯ ತಾಕತ್ತು!. ಅಲ್ಲಿ ತರಬೇತಿಗಾಗಿ ಸೇರಿಕೊಳ್ಳುವವರು, ಕೌಶಲ್ಯಯುತ ತರಬೇತಿಯೊಂದಿಗೆ ಹೊರ ಬರುವ ಹೊತ್ತಿಗೆ ಮನದಲ್ಲಿ ಗಟ್ಟಿ ಶಪಥ ಮಾಡಿಕೊಂಡರೇ,ಖಂಡಿತವಾಗಿಯೂ ಅಲ್ಲೊಂದು ಯಶಸ್ಸು ಕಟ್ಟಿಟ್ಪ ಬುತ್ತಿ!. ಹೌದು, ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆ! ಇಲ್ಲಿ ತರಬೇತಿ ಪಡೆದು, ಸಾಧಿಸುವ ಛಲದೊಂದಿಗೆ ಸರಿಯಾದ ದಾರಿಯಲ್ಲಿ ಶ್ರಮ ಪಟ್ಪವನು ಎಂದಿಗೂ ಸೋತಿಲ್ಲ. ಹಾಗೆ ಗೆದ್ದು ಯಶಸ್ವಿ ಉದ್ಯಮ ನಡೆಸಿ ಬದುಕು ಕಟ್ಟಿಕೊಂಡವರು ಒಟ್ಟಾಗಿ ಕಟ್ಟಿದ ಸಂಘಟನೆಯೇ ಆಸರೆ.

ಬೇರೆ-ಬೇರೆ ಕಡೆ ಈ ಸಂಘಟನೆ ಇದೆಯಾದರೂ, ಬೆಂಗಳೂರಿನ ಆಸರೆ ಸಂಸ್ಥೆಯ ತೂಕ ಬೇರೆಯದ್ದೇ ಆಗಿದೆ. ತಮ್ಮ ಸ್ಪಷ್ಟ ನಿಲುವು, ಕಾರ್ಯಕ್ಷಮತೆ ಹಾಗು ಧಕ್ಷತೆಯ ಲೆಕ್ಕಾಚಾರದಲ್ಲಿ ಖುದ್ದು ರುಡ್ಸೆಟಿ ನಿರ್ಮಾತೃ, ಪೂಜ್ಯ ಡಾ.ಡಿ.ವಿರೇಂದ್ರ ಹೆಗ್ಗಡೆಯವರೂ ಸೇರಿದಂತೆ ಇಡಿಯ ರುಡ್ಸೆಟ್ ಸಂಸ್ಥೆಗೆ ಬೆಂಗಳೂರು ಆಸರೆ ಸಂಘ ಎಂದರೆ ಅಚ್ಚುಮೆಚ್ಚು. ಹಾಗಿತ್ತು ಅದರ ಕಾರ್ಯವೈಖರಿ. ಅಂಥ ಸಂಘವು ಕರೋನ ನಂತರದಲ್ಲಿ ಸ್ವಲ್ಪ ನೆನೆಗುದಿಗೆ ಬಿದ್ದಂತಾಗಿತ್ತು. ಹಾಗೆಯೇ ಬಿಟ್ಟರೆ ಚೈತನ್ಯಶೀಲ ಸಂಘವೊಂದು ಸುಖಾ-ಸುಮ್ಮನೆ ಗೌಣವಾಗುವ ಸೂಚನೆ ಅರಿತ ರುಡ್ಸೆಟ್ ಸಂಸ್ಥೆಯವರು, ಸಂಘದ ಸರ್ವ ಸದಸ್ಯರ ಸಭೆ ಕರೆದು, ನೂತನವಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿ ಆಸರೆಗೆ ಮರುಜೀವಕೊಡಿಸಿದ್ದಾರೆ.

ಆರ್ ಸೆಟಿಯ ಮಾಜಿ ರಾಷ್ಟ್ರೀಯ ನಿರ್ದೇಶಕರು, ರಾಷ್ಟ್ರೀಯ ಆರ್ ಸೆಟಿಗಳ ಉತ್ಕೃಷ್ಟತಾ ಕೇಂದ್ರ ಹಾಗೂ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಸೆನೆಟ್ ಸದಸ್ಯರು ಕೊಡಗು ಯುನಿವರ್ಸಿಟಿ ಹಾಗೂ ರಾಜ್ಯಸಭಾ ಸದಸ್ಯರಾದ ಪೂಜ್ಯ ಡಾ.ಡಿ. ವಿರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿಗಳೂ ಆದ “ಕೆ.ಎನ್. ಜನಾರ್ಧನ್” ಅವರ ಮಾರ್ಗದರ್ಶನದಲ್ಲಿ ಆಸರೆಗೆ ನೂತನವಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಈ ವೇಳೆ ಅರಶಿನಕುಂಟೆ ರುಡ್ಸೆಟಿಯ ನಿರ್ದೇಶಕರಾದ ರವಿಕುಮಾರ್ ಹಾಗು ಹಿರಿಯ ಉಪನ್ಯಾಸಕರಾದ ರವೀಂದ್ರ ಜೊತೆಗಿದ್ದರು. ಸದಸ್ಯರು ಮತ್ತು ಗಣ್ಯಮಾನ್ಯರ ಸರ್ವಾನುಮತದೊಂದಿಗೆ ಅಧ್ಯಕ್ಷರಾಗಿ ಯಶಸ್ವಿ ಉದ್ಯಮಿ ವಿ. ರಾಮಸ್ವಾಮಿಯವರನ್ನು ಆಯ್ಕೆ ಮಾಡಲಾಯಿತು. ಇನ್ನು ರವಿಶಂಕರ್. ಆರ್ ಮತ್ತು ಸತೀಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ರುಡ್ಸೆಟಿಯ ಮುಂಚೂಣಿ ಮಹಿಳಾ ಉದ್ಯಮಿ ‘ಡಾರೆಟ್ ಕ್ರಿಸ್ಟಬೆಲ್’ ಕಾರ್ಯದರ್ಶಿಯಾಗಿ ಪುನರ್ ಆಯ್ಕೆಗೊಂಡರು. ಹಾಗೆಯೇ, ಮಂಜುನಾಥ್ ಮತ್ತು ಕಿಟ್ಟಿಕುಮಾರ್ ಸಹಕಾರ್ಯದರ್ಶಿಗಳಾಗಿ, ಗೋವರ್ಧನ್ ಖಜಾಂಚಿಯಾಗಿ ಆಯ್ಕೆಗೊಂಡರು. ಹಿಂದೆ ಅಧ್ಯಕ್ಷರಾಗಿದ್ದ ಧನಂಜಯ್ ಗೌರವಾಧ್ಯಕ್ಷರಾಗಿ ಮುಂಬಡ್ತಿ ಪಡೆದರು.

ಒಟ್ಟಿನಲ್ಲಿ ‘ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ಉದ್ಯಮಿಗಳಾಗಿ ಯಶಸ್ವಿಯಾದವರು, ಸಮನ್ವಯತೆಗಾಗಿ, ಪರಸ್ಪರ ಸಹಕಾರಕ್ಕಾಗಿ ಹಾಗೂ ಸಮಾಜಕ್ಕೆ ತಮ್ಮಿಂದಾದ ಸೇವೆ ಸಲ್ಲಿಸುವ ಸಲುವಾಗಿ ಬೆಂಗಳೂರು ರುಡ್ಸೆಟಿ ಮೂಲಕ 2003ರಲ್ಲಿ “ಆಸರೆ’ ಎಂಬ ಶಿರೋನಾಮೆಯೊಂದಿಗೆ ಸಂಘಟಿತರಾಗಿ, ಸಂಸ್ಥೆಯ ಪ್ರತಿ ಕಾರ್ಯದಲ್ಲೂ ಜೊತೆಯಾಗುತ್ತಾ ಸಮಾಜಮುಖಿಯಾಗಿ ತನ್ನದೇ ಆದ ಸೇವೆಗೈಯ್ಯುತ್ತಾ ಸಾಗಿ ಬಂದಿದ್ದರು. ಕರೋನಾ ನಂತರದಲ್ಲಿ ಒಂದಷ್ಟು ಅಡೆ-ತಡೆಗಳ ನಡುವೆ ಹಿನ್ನೆಲೆಯಲ್ಲಿದ್ಧ ಸಂಘವು, ಈಗ ಮತ್ತೆ ಮೈಕೊಡವಿಕೊಂಡು ಕಾರ್ಯಾಚರಣೆಗೆ ಸರ್ವಸನ್ನದ್ಧವಾಗಿ ಸಜ್ಜಾಗಿದೆ.

ಈ ವೇಳೆ ಸಂಘಕ್ಕೆ ಪುಷ್ಟಿಕೊಡುವ ಮಾತಾಡಿದ ಜನಾರ್ಧನ್ ಅವರು ” ಬೋರ್ಡಿನಲ್ಲಿ ಬರೆದದ್ದರ ಮೇಲೆಯೇ ಬರೆದರೆ, ಅದು ಅಸ್ಪಷ್ಟವಾಗಿರುತ್ತೆ; ಬದಲಿಗೆ ಇಲ್ಲಿಯ ತನಕ ಬರೆದದ್ದನ್ನು ಅಳಿಸಿ, ಹೊಸದಾಗಿ ಬರೆಯಿರಿ. ಆಗ ಸ್ಪಷ್ಟತೆ ಇರುತ್ತೆ” ಎಂದು ತಿಳಿಸಿ ಹಿಂದೆ ಆಗಿದ್ದನ್ನು ಮರೆತು, ಆಗುವುದರೆಡೆಗೆ ಮನಮಾಡಿರಿ ಎಂಬಂತೆ ವಿಕಸನದ ಮಾತಾಡಿ ಹುರುಪು ತುಂಬಿದರು.. ಅವರ ಆ ಸ್ಪೂರ್ತಿದಾಯಕ ಮಾತಿಗೆ ತಲೆದೂಗಿದ ಆಸರೆಯ ಪದಾಧಿಕಾರಿಗಳು ಹಾಗು ಸರ್ವ ಸದಸ್ಯರುಗಳು ಸಂಘದ ಸರ್ವತೋಮುಖ ಬೆಳವಣಿಗೆಗಾಗಿ ಕಟೀಬದ್ಧರಾಗಿರುತ್ತೇವೆಂದು ಪಣತೊಟ್ಟರು.
