ಹೈದರಾಬಾದ್: ಎಐಎಂಐಎಂ ಪಕ್ಷದ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ವೀರ ಸಾವರ್ಕರ್ ಹಾಗೂ ಆರೆಸ್ಸೆಸ್ ಮಾಜಿ ಮುಖ್ಯಸ್ಥ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಕುರಿತು ನೀಡಿದ ಹೇಳಿಕೆ ಈಗ ಭಾರಿ ಟೀಕೆಗೆ ಗುರಿಯಾಗಿದೆ. “ಛತ್ರಪತಿ ಶಿವಾಜಿ ಮಹಾರಾಜ ಪುತ್ರ ಛತ್ರಪತಿ ಸಂಭಾಜಿಯನ್ನು ಸಾವರ್ಕರ್ ಹಾಗೂ ಗೋಳ್ವಲ್ಕರ್ ನಿಂದಿಸಿದ್ದರು” ಎಂಬುದಾಗಿ ನೀಡಿರುವ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
“ಸಾವರ್ಕರ್ ಹಾಗೂ ಗೋಳ್ವಲ್ಕರ್ ಅವರು ಸಂಭಾಜಿಯನ್ನು ನಿಂದಿಸಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸಂಭಾಜಿ ಕುರಿತ ಛಾವಾ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ, ಮೋದಿ ಅವರು ಗೋಳ್ವಲ್ಕರ್ ಅವರನ್ನು ತಮ್ಮ ಮಾರ್ಗದರ್ಶಕ, ಗುರು ಎಂದು ಹೇಗೆ ಕರೆಯುತ್ತಾರೆ” ಎಂದು ಓವೈಸಿ ಪ್ರಶ್ನಿಸಿದ್ದಾರೆ.
ಅಸಾದುದ್ದೀನ್ ಓವೈಸಿ ಹೇಳಿಕೆಗೆ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶ್ವಾನಗಳು ಬೊಗಳುತ್ತಿರುತ್ತವೆ. ಹಾಗಂತ ನಾವು ಅವುಗಳ ಕಡೆಗೆ ಹೆಚ್ಚಿನ ಗಮನ ಹರಿಸುವುದು ಬೇಕಾಗಿಲ್ಲ. ಅಸಾದುದ್ದೀನ್ ಓವೈಸಿ ಒಬ್ಬ ಸುಳ್ಳುಗಾರ. ಅವರು ಔರಂಗಜೇಬ್ ಸಮಾಧಿ ಎದುರು ತಲೆಬಗ್ಗಿಸಿ ನಿಲ್ಲುತ್ತಾರೆ ಎಂದರೆ ಅವರ ಹಿನ್ನೆಲೆ ಎಂತಹದ್ದು ಎಂಬುದು ಎಂದು ಗೊತ್ತಾಗುತ್ತದೆ” ಎಂದು ಹೇಳಿದ್ದಾರೆ.
ಹೋಳಿ ಹಬ್ಬದ ಆಚರಣೆ ವೇಳೆ ಗಲಭೆ ತಡೆಯುವ ದಿಸೆಯಲ್ಲಿ ಮುಸ್ಲಿಮರು ಮನೆಯಲ್ಲೇ ಇರಬೇಕು ಎಂಬುದಾಗಿ ಯೋಗಿ ಆದಿತ್ಯನಾಥ್ ಹೇಳಿಕೆಗೂ ಅಸಾದುದ್ದೀನ್ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಭಾರತದ ಮುಸ್ಲಿಮರೇನೂ ಹೇಡಿಗಳಲ್ಲ” ಎಂದು ಓವೈಸಿ ಹೇಳಿದ್ದಾರೆ. ಇದಕ್ಕೂ ಮೊದಲು ಕೂಡ ಓವೈಸಿ ಅವರು ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು.