ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ, ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಬದುಕು ಅನುಭವಿಸುತ್ತಿದ್ದಾರೆ ಎನ್ನುವುದು ಸಾಬೀತಾಗುತ್ತಿದ್ದಂತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ, ಅಲ್ಲಿನ ಕೈದಿಗಳಿಗೆ ದರ್ಶನ್ ಬರುತ್ತಿದ್ದಂತೆ ಸಂಕಷ್ಟ ಶುರುವಾಗಿದೆ.
ಆರಂಭದಲ್ಲಿ ದರ್ಶನ್ ಬರುತ್ತಾರೆ ಅನ್ನುತ್ತಿದ್ದಂತೆ ಕೈದಿಗಳು ಖುಷಿಯಾಗಿದ್ದರೇನೋ? ದರ್ಶನ್ ರನ್ನು ನೋಡಬಹುದು ಅಂತಾ ಅಂದುಕೊಂಡಿರಬಹುದು? ಆದರೆ, ಈಗ ದರ್ಶನ್ ನಿಂದಲೇ ಅವರಿಗೆಲ್ಲ ಸಂಕಷ್ಟ ಎದುರಾಗಿದೆ. ದರ್ಶನ್ ಜೈಲಿಗೆ ಬರುತ್ತಿದ್ದಂತೆ ಜೈಲಿನೊಳಗಿದ್ದ ಕ್ಯಾಂಟೀನ್ ಬಂದ್ ಮಾಡಿಸಲಾಗಿದೆ. ಹೀಗಾಗಿ ಇನ್ನುಳಿದ ಕೈದಿಗಳಿಗೆ ಜೈಲಿನಲ್ಲಿ ಸಿಗುವುದನ್ನೇ ತಿನ್ನುವ ಅನಿವಾರ್ಯತೆ ಎದುರಾಗಿದೆ.
ಒಪ್ಪಿಗೆ ಇರುವ ಕೆಲ ವಸ್ತುಗಳನ್ನು ಕ್ಯಾಂಟೀನ್ ನಲ್ಲಿ ಇಡಲಾಗುತ್ತಿತ್ತು. ಅದನ್ನು ಕೈದಿಗಳು ಖರೀದಿಸುತ್ತಿದ್ದರು. ಈಗ ಕ್ಯಾಂಟೀನ್ ಇಲ್ಲದೆ ಕೇವಲ ಜೈಲು ಊಟ ಮಾಡುವ ಪರಿಸ್ಥಿತಿ ಬಂದಿದೆ. ಇನ್ನು ಬಳ್ಳಾರಿ ಜೈಲಿನಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದು, ದರ್ಶನ್ ಒದ್ದಾಡಿದ್ದಾರೆ ಎನ್ನಲಾಗಿದೆ. ಆಗಸ್ಟ್ 31ರ ರಾತ್ರಿ ಹೈ ಸೆಕ್ಯುರಿಟಿ ಜೈಲು ವಿಭಾಗದ ಪ್ಯಾಸೇಜ್‌ನಲ್ಲಿ ವಾಕ್ ಮಾಡಿದ್ದಾರೆ. ರಾತ್ರಿ ಅವರಿಗೆ ನಿದ್ದೆ ಬರುತ್ತಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ದರ್ಶನ್ ಇರುವ ಹೈ ಸೆಕ್ಯುರಿಟಿ ಜೈಲ್ ವಿಭಾಗದಿಂದ ಐದು ಕೈದಿಗಳನ್ನು ಬೇರೆ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಹೈ ಸೆಕ್ಯುರಿಟಿ ಸೆಲ್ ನಲ್ಲಿ ಈಗ ದರ್ಶನ್ ಸೇರಿದಂತೆ ಮೂವರು ಕೈದಿಗಳಿದ್ದಾರೆ. ಆದರೆ, ಇದುವರೆಗೂ ಕುಟುಂಬಸ್ಥರು ದರ್ಶನ್ ರನ್ನು ನೋಡಲು ಬಂದಿಲ್ಲ.